ರಾಷ್ಟ್ರರಕ್ಷಾ ಸಂಗಮ ಸ್ವಾಗತ ಸಮಿತಿ ರಚನೆ

ಮಂಗಳೂರು, ಜು.31: ‘ಹಿಜರಿ ಪ್ರಸ್ತುತತೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಹರ‌್ರಂ ಸಂದೇಶ ಕಾರ್ಯಕ್ರಮವು ನಗರದ ಬಂದರ್‌ನಲ್ಲಿ ರುವ ಸಮಸ್ತ ಕಚೇರಿಯಲ್ಲಿ ಶನಿವಾರ ಜರಗಿತು.
ಎಸ್‌ವೈಎಸ್ ಜಿಲ್ಲಾಧ್ಯಕ್ಷ ಯುಕೆ ಅಝೀಝ್ ದಾರಿಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಪಿ ಅಬ್ದುರ‌್ರಹ್ಮಾನ್ ದಾರಿಮಿ ತಬೂಕು ಮಹರ‌್ರಂ ಸಂದೇಶ ನೀಡಿದರು.
ಸ್ವಾತಂತ್ರ್ಯ ದಿನದಂದು ಕೇಂದ್ರ ಸಮಿತಿಯ ನಿರ್ದೇಶನದ ಪ್ರಕಾರ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿರುವ ‘ರಾಷ್ಟ್ರ ರಕ್ಷಾ ಸಂಗಮ’ ವನ್ನು ದೇರಳಕಟ್ಟೆಯಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಸಕ್ತ ಸನ್ನಿವೇಶದಲ್ಲಿ ಪರಸ್ಪರ ಮತೀಯ ಸಂಘರ್ಷವನ್ನು ತಡೆದು ಸಭ್ಯತೆಯನ್ನು ಪಾಲಿಸಿಕೊಂಡು ರಾಷ್ಟ್ರ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕಾರ್ಯ ಪಧ್ಧತಿಯೊಂದಿಗೆ ಮುಂದುವರಿಯಲು ನಿರ್ಧರಿಸಲಾಯಿತು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಂದು ದೇರಳಕಟ್ಟೆಯಲ್ಲಿ ನಡೆಯಲಿರುವ ವಿಶೇಷ ಸೌಹಾರ್ದ ಸಂಗಮದ ಯಶಸ್ವಿಗಾಗಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸ್ವಾಗತ್ ಅಬೂಬಕರ ಹಾಜಿ, ಸಂಚಾಲಕರಾಗಿ ಮುಸ್ತಫಾ ಫೈಝಿ ಕಿನ್ಯ, ಕೋಶಾಧಿಕಾರಿಯಾಗಿ ತಬೂಕು ದಾರಿಮಿ ಸಹಿತ 150 ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಸ್ವಾಗತಿಸಿದರು. ಹನೀಫ್ ಮುಸ್ಲಿಯಾರ್ ವಂದಿಸಿದರು.





