ಪುತ್ತೂರು | ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ: ಪ್ರಕರಣ ದಾಖಲು

ಪುತ್ತೂರು: ಥಾಯ್ಲೆಂಡ್ ದೇಶದ ಕಂಪೆನಿಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಂಗಳೂರಿನ ಯುವಕನೊಬ್ಬನಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಸೋಮೇಶ್ವರ ನಿವಾಸಿಗಳಾದ ಹುಸೈನ್-ಝುಬೈದಾ ದಂಪತಿಯ ಪುತ್ರ ಅಹ್ಮದ್ ರಝಾಕ್ ವಂಚನೆಗೊಳಗಾದವರು.
ಸಂತ್ರಸ್ತ ಯುವಕ ಮಯನ್ಮಾರ್ ದೇಶದಲ್ಲಿ ಬಂಧನಕ್ಕೊಳಗಾಗಿರುವುದಾಗಿ ಕರೆ ಮಾಡಿ ತಿಳಿಸಿರುವುದಾಗಿ ತಾಯಿ ಝುಬೈದಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನಲ್ಲೇನಿದೆ?:
ತನ್ನ ಮಗ ಅಹ್ಮದ್ ರಝಾಕ್ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿ ಉದ್ಯೋಗದ ಹುಡುಕಾಟದಲ್ಲಿದ್ದಾಗ ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್‌ನ ಮಾಲಕ ಇಲ್ಯಾಸ್ ಮತ್ತು ಆತನ ಸಹವರ್ತಿ ಯಶ್ ಎಂಬವರ ಪರಿಚಯವಾಗಿತ್ತು. ಅವರು ಮಗನಿಗೆ ಥಾಯ್ಲೆಂಡ್‌ದೇಶದ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿ 1,50,000 ರೂ. ಪಡೆದುಕೊಂಡಿದ್ದರು. ಅದರಂತೆ ಅ.17ರಂದು ಥಾಯ್ಲೆಂಡ್‌ಗೆ ತೆರಳಲು ಟಿಕೆಟ್ ಹಾಗೂ ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸಿ ನೀನು ಥಾಯ್ಲೆಂಡ್ ತಲುಪಿದ ತಕ್ಷಣ ಅಲ್ಲಿಂದ ನನ್ನ ಪರಿಚಯಸ್ಥರು ನಿನ್ನನ್ನು ಕಂಪೆನಿಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ಮಂಗಳೂರಿನಿಂದ ದಿಲ್ಲಿಗೆ ಕಳುಹಿಸಿ, ಬಳಿಕ ಅಲ್ಲಿಂದ ಬ್ಯಾಂಕಾಕ್‌ಗೆ ಕಳುಹಿಸಿಕೊಟ್ಟಿದ್ದಾರೆ.
ಅ.18ರಂದು ರಾತ್ರಿ ಪುತ್ರ ರಝಾಕ್ ನನಗೆ ಫೋನ್ ಕರೆ ಮಾಡಿ ‘ನಾನು ಥಾಯ್ಲೆಂಡ್ ಏರ್‌ಪೋರ್ಟ್‌ಗೆ ತಲುಪಿದ ಬಳಿಕ ಅಲ್ಲಿಂದ ಕೆಲವು ವ್ಯಕ್ತಿಗಳು ಕಾರಿನಲ್ಲಿ ನನ್ನನ್ನು ಬೇರೆ ಬೇರೆ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ನಾನು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ, ಆಹಾರ, ನೀರು ನೀಡದೇ ಸುತ್ತಾಡಿಸಿ ಯಾವುದೋ ಒಂದು ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಾರೆ. ನನಗೆ ಇಲ್ಲಿ ತೊಂದರೆಯಾಗುತ್ತಿದೆ ಎಂದು ಹೇಳಿದ್ದ.
ನಂತರ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ನನಗೆ ಥಾಯ್ಲೆಂಡ್ ದೇಶದಲ್ಲಿ ಕೆಲಸ ಕೊಡಿಸುವ ಬದಲು ಮಯನ್ಮಾರ್ ದೇಶಕ್ಕೆ ಕೆಲಸಕ್ಕೆ ಕಳುಹಿಸಿದ್ದಾರೆ. ಇಲ್ಲಿ ಮಯನ್ಮಾರ್ ಸೇನೆಯು ನನ್ನನ್ನು ಹಾಗೂ ಇತರ ಕೆಲವು ವ್ಯಕ್ತಿಗಳನ್ನು ಬಂಧಿಸಿ ನಮ್ಮ ಬಳಿ ಇದ್ದ ಮೊಬೈಲ್ ಫೋನ್ ವಶಪಡಿಸಿಕೊಂಡಿರುತ್ತಾರೆ. ಈಗ ನಾವು ಮಯನ್ಮಾರ್ ಸೇನೆಯ ಬಂಧನದಲ್ಲಿ ಇದ್ದೇವೆ ಎಂದು ತಿಳಿಸಿದ್ದಾನೆ.
ಈ ಕುರಿತು ಅ.29ಕ್ಕೆ ನಾನು ಪುತ್ತೂರಿನ ಗೋಲ್ಡನ್ ಟ್ರಾವೆಲ್ಸ್‌ನ ಮಾಲಕ ಇಲ್ಯಾಸ್‌ಗೆ ಕರೆ ಮಾಡಿ ವಿಚಾರಿಸಿದಾಗ ಅವರು ಬೇಜವಬ್ದಾರಿಯಿಂದ ಉತ್ತರಿಸಿದ್ದಾರೆ. ಮಗನಿಗೆ ಥಾಯ್ಲೆಂಡ್ ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 1,50,000 ರೂ. ಪಡೆದು ಮೋಸ ಮಾಡಿ ಮಯನ್ಮಾರ್ ದೇಶಕ್ಕೆ ಕಳುಹಿಸಿ ತೊಂದರೆಗೆ ಒಳಗಾಗುವಂತೆ ಮಾಡಲಾಗಿದೆ’ ಎಂದು ಝುಬೈದಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಕಲಂ:10, 24 ಇಮಿಗ್ರೇಷನ್ ಆಕ್ಟ್ 1983ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







