ಮಂಗಳೂರು| ವಿದೇಶದಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಲಕ್ಷಾಂತರ ರೂ. ಪಡೆದು ವಂಚನೆ: ಸಂತ್ರಸ್ತರಿಂದ ದೂರು

ಸಾಂದರ್ಭಿಕ ಚಿತ್ರ
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಏಜೆಂಟ್ ಎಂದು ಹೇಳಿಕೊಂಡು ಆಲ್ವಿನ್ ಡಿಮೆಲ್ಲೊ ಎಂಬಾತ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿದ್ದು, ತತ್ಕ್ಷಣ ಈತನನ್ನು ಬಂಧಿಸಿ, ಉದ್ಯೋಗದ ನೆಪದಲ್ಲಿ ಪಡೆದಿರುವ ಹಣವನ್ನು ವಾಪಸ್ ಕೊಡಿಸಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತರಲ್ಲಿ ಓರ್ವರಾದ ಬ್ರ್ಯಾಡೆನ್ ಪಿಂಟೊ, ತಾನು ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದು, 2022ರಲ್ಲಿ ಕಂಕನಾಡಿಯಲ್ಲಿ ಆಲ್ವಿನ್ ನಡೆಸುತ್ತಿದ್ದ ‘ದಿ ಲೆಜೆಂಡ್’ ಎನ್ನುವ ಸಂಸ್ಥೆಗೆ ಭೇಟಿ ನೀಡಿ ಉದ್ಯೋಗದ ಬಗ್ಗೆ ವಿಚಾರಿಸಿದ್ದೆ. 1.30 ಲಕ್ಷ ರೂ. ಪಡೆದುಕೊಂಡಿದ್ದ ಆತ 3 ತಿಂಗಳಲ್ಲಿ ಉದ್ಯೋಗ ಕೊಡಿಸುವುದಾಗಿ ತಿಳಿಸಿದ್ದ. ಆದರೆ 10 ತಿಂಗಳು ಕಳೆದರೂ ಕೆಲಸ ಕೊಡಿಸದ ಹಿನ್ನೆಲೆಯಲ್ಲಿ ಮತ್ತೆ ಆತನನ್ನು ಪ್ರಶ್ನಿಸಿದಾಗ ವೀಸಾ ಸಿಗುವುದು ಕಷ್ಟವಿದೆ, ಹಣ ವಾಪಾಸು ಕೊಡುತ್ತೇನೆ ಎಂದಿದ್ದ. ಆದರೆ ಈಗ ಮೂರು ವರ್ಷ ಕಳೆದಿದೆ. ಉದ್ಯೋಗವೂ ಇಲ್ಲ, ಹಣವೂ ವಾಪಸ್ ಸಿಕ್ಕಿಲ್ಲ. ಈತ ಹಲವಾರು ಮಂದಿಯಿಂದ ಇದೇ ರೀತಿ 5-8 ಲಕ್ಷದ ವರೆಗೆ ಹಣ ಪಡೆದು ವಂಚಿಸಿದ್ದಾನೆ. ಈಗ ಹಣ ಕೊಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಕಮಿಷನರ್ರನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ. ಬಂದರು ಠಾಣೆಗೆ ದೂರು ನೀಡಿದ್ದೇವೆ. ಇಲ್ಲಿಯ ವರೆಗೆ ಎಫ್ಐಆರ್ ದಾಖಲಾಗಿಲ್ಲ ಎಂದರು.
ಸಂತ್ರಸ್ತೆಯೊಬ್ಬರ ತಾಯಿ ಅನಿತಾ ಫೆರ್ನಾಂಡಿಸ್ ಮಾತನಾಡಿ, ಮಗಳಿಗೆ ವಿದೇಶದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಕುರಿತಂತೆ ವಿಚಾರಣೆಗಾಗಿ ಆಲ್ವಿನ್ ಬಳಿ ಹೋಗಿದ್ದೆ. ಆತ ನೆದರ್ಲ್ಯಾಂಡ್ನಲ್ಲಿ ಉದ್ಯೋಗವಿಗೆ ಎಂದು ನಮ್ಮನ್ನು ನಂಬಿಸಿ 2 ಲಕ್ಷ ರೂ. ಅಡ್ವಾನ್ಸ್ ಹಣ ಪಡೆದಿದ್ದ. ಪುತ್ರಿಯ ಪಿಯುಸಿ ಶಿಕ್ಷಣ ಪೂರ್ಣಗೊಂಡ ಬಳಿಕ ಸಂಪರ್ಕಿಸಿದಾಗ 3 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಿ ಅದನ್ನೂ ಕೊಟ್ಟಿದ್ದೇವೆ. ಆದರೆ ಆತ ನಂಬಿಕೆಗೆ ದ್ರೋಹ ಮಾಡಿದ್ದಾನೆ. ಈಗ ಕಚೇರಿಯನ್ನು ಬಂದ್ ಮಾಡಿ ತಲೆ ಮರೆಸಿಕೊಂಡಿದ್ದಾನೆ ಎಂದು ಆರೋಪಿಸಿದರು.
ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, 2023ರ ನವೆಂಬರ್ ತಿಂಗಳಲ್ಲೇ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ವಿವರಿಸಲಾಗಿತ್ತು. ಆಗಿನ ಆಯುಕ್ತರು ಕೇಂದ್ರ ವಿಭಾಗದ ಎಸಿಪಿಯವರನ್ನು ಭೇಟಿಯಾಗಲು ತಿಳಿಸಿದ್ದು, ಎಸಿಪಿಯವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಕೆಲವು ಸಂತ್ರಸ್ತರನ್ನು ಪೊಲೀಸರು ಬಂದರು ಠಾಣೆಗೆ ಕರೆಸಿಕೊಂಡು ದಾಖಲೆಗಳನ್ನೂ ಪಡೆದುಕೊಂಡಿದ್ದರು. ಆದರೆ ಈ ವರೆಗೂ ಆರೋಪಿಯ ಬಂಧನವಾಗಿಲ್ಲ. ಗೋವಾದ ಉದ್ಯೋಗಾಕಾಂಕ್ಷಿಗಳಿಗೂ ಆತ ಇದೇ ರೀತಿಯಲ್ಲಿ ವಂಚಿಸಿರುವ ಮಾಹಿತಿಯಿದ್ದು, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತೆ ಲೀನಾ ಫೆರ್ನಾಂಡಿಸ್, ಸಂತ್ರಸ್ತೆಯೊಬ್ಬರ ತಂದೆ ಕ್ಸೇವಿಯರ್ ಮಥಾಯಸ್, ಗಿಲ್ಬರ್ಟ್ ವಾಸ್, ತುಳುನಾಡ ರಕ್ಷಣಾ ವೇದಿಕೆ ನಗರ ಅಧ್ಯಕ್ಷ ಶರಣ್ ರಾಜ್ ಉಪಸ್ಥಿತರಿದ್ದರು.