ಅಧಿಕ ಲಾಭದ ಆಮಿಷವೊಡ್ಡಿ ವಂಚನೆ : ಪ್ರಕರಣ ದಾಖಲು

ಮಂಗಳೂರು, ನ.11: ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ 2 ಕೋ.ರೂ. ವಂಚನೆ ಮಾಡಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ 2022ರ ಮೇ 1ರಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ತಾನು ಡೆಲ್ಟಿನ್ ರೋಯಲ್ ಕಂಪನಿಯ ಅಂಕಿತ್ ಎಂದು ಪರಿಚಯಿಸಿದ್ದ. ಆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಹಾಗೂ ಲಾಭಾಂಶವನ್ನು ನೀಡುವುದಾಗಿ ತಿಳಿಸಿದ್ದ. ಅಲ್ಲದೆ ಸುಮಿತ್ ಜೈಸ್ವಾಲ್, ಕುಶಾಗರ್ ಜೈನ್, ಅಖಿಲ್ ಎಂಬುವರ ಪರಿಚಯವನ್ನೂ ಮಾಡಿದ್ದ. ಇದನ್ನೆಲ್ಲಾ ನಂಬಿದ ತಾನು 2022ರ ಮೇ 1ರಂದು 3,500 ರೂ. ಹಣವನ್ನು ಅಂಕಿತ್ ನೀಡಿದ ಅಪರಿಚಿತ ವ್ಯಕ್ತಿಯ ಸ್ಕ್ಯಾನರ್ ಮೂಲಕ ಫೆಡರಲ್ ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾಯಿಸಿದೆ. ಆ ದಿನ ತನಗೆ 1,000 ರೂ. ಲಾಭಾಂಶದ ಹಣವನ್ನು ತನ್ನ ಫೆಡೆರಲ್ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು. ಬಳಿಕ ತಾನು ಹಂತ ಹಂತ ವಾಗಿ ಫೆಡೆರಲ್ ಬ್ಯಾಂಕ್, ಕೆನರಾ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ತನ್ನ ಸಂಬಂಧಿಕರ ಖಾತೆಯಿಂದ 2022ರ ಮೇ ತಿಂಗಳಿಂದ 2025ರ ಆ.29ರವರೆಗೆ 2 ಕೋ.ರೂ.ಗಿಂತಲೂ ಹೆಚ್ಚಿನ ಹಣ ವರ್ಗಾವಣೆ ಮಾಡಿರುವೆ.
ಕಳೆದ ಮೂರು ತಿಂಗಳಿನಿಂದ ಆರೋಪಿಗಳು ವಾಟ್ಸ್‌ಆ್ಯಪ್ ಮೆಸೇಜ್ ಮತ್ತು ಕರೆ ಮಾಡಿದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ಅನುಮಾನಗೊಂಡು ಅಂಕಿತ್ ಬಳಿ ಕರೆ ಮಾಡಿ ಹಣ ವಾಪಸ್ ನೀಡುವಂತೆ ಕೇಳಿದಾಗ ಕುಶಾಗರ್ ಜೈನ್, ಅಖಿಲ್ ಮತ್ತು ಸುಮಿತ್ ಜೈಸ್ವಾಲ್ ಮೋಸ ಮಾಡಿರುವ ಬಗ್ಗೆ ಹೇಳಿದ್ದಾನೆ ಎಂದು ಹಣ ಕಳಕೊಂಡ ವ್ಯಕ್ತಿ ತಿಳಿಸಿದ್ದಾರೆ.
ಬಳಿಕ ವಾಟ್ಸ್‌ಆ್ಯಪ್ ಮೂಲಕ ಕರೆ ಮಾಡಿದ ಆರೋಪಿಗಳು ಹೂಡಿಕೆ ಮಾಡಿದ ಯಾವುದೇ ಹಣ ಹಿಂದಿರುಗಿಸುವುದಿಲ್ಲ. ಈ ಬಗ್ಗೆ ದೂರು ನೀಡಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.







