ಪಿಲಿಕುಳದಲ್ಲಿ ಹಣ್ಣುಗಳ ಮೇಳ 2025ಕ್ಕೆ ಚಾಲನೆ

ಮಂಗಳೂರು, ಜೂ. 14: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿರುವ ಎರಡು ದಿನಗಳ ಹಣ್ಣುಗಳ ಮೇಳ- 2025ಕ್ಕೆ ಪಿಲಿಕುಳದ ಅರ್ಬನ್ ಹಾತ್‌ನಲ್ಲಿ ಶನಿವಾರ ಚಾಲನೆ ದೊರಕಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲಸು, ಮಾವಿನ ಹಣ್ಣಿನ ಜತೆಗೆ, ಇತರ ಮೌಲ್ಯವರ್ಧಿತ ಉತ್ಪನ್ನಗಳೊಂದಿಗೆ ರೈತರು, ಕುಶಲಕರ್ಮಿಗಳು ಹಾಗೂ ಗೃಹೋದ್ಯಮಿಗಳ ಮಳಿಗೆಗಳು ಮೇಳದಲ್ಲಿವೆ. ಮಾವು, ಹಲಸು, ಅವಕಾಡೊ, ನೇರಳೆ, ಕಿತ್ತಳೆ ಹಣ್ಣುಗಳ ಮಾರಾಟದ ಜತೆಗೆ ಹಣ್ಣು ಹಂಪಲುಗಳ ಗಿಡಗಳು ಮಾರಾಟ ಹಾಗೂ ಪ್ರದರ್ಶನಕ್ಕಿಡಲಾಗಿದೆ. ಹಲಸಿನ ಹಣ್ಣಿನ ಬಿಸಿಬಿಸಿ ಹೋಳಿಗೆ, ಗಾರಿಗೆ, ಕಬಾಬ್, ಮಶ್ರೂಮ್‌ನ ಮೊಮೋಸ್ ಸೇರಿದಂತೆ ವಿವಿಧ ಬಗೆಯ ಖಾದ್ಯಗಳ ಮಳಿಗೆಗಳೂ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಮಹಿಳಾ ಗೃಹೋದ್ಯಮಿಗಳು ತಯಾರಿಸಿದ ಕರಕುಶಲ ವಸ್ತುಗಳು, ತಿಂಡಿ ತಿನಿಸಗಳು, ಜೋಳದ ರೊಟ್ಟಿ, ಚಟ್ನಿ ಪುಡಿಯೂ ಇಲ್ಲಿ ಮಾರಾಟಕ್ಕಿಡಲಾಗಿದೆ.
‘ಪ್ರತಿ ವರ್ಷ ನಾವು ಪಿಲಿಕುಳದ ಈ ಹಣ್ಣುಗಳ ಮೇಳದಲ್ಲಿ ಭಾಗವಹಿಸುತ್ತಿದ್ದೇವೆ. ಉತ್ತಮ ಗ್ರಾಹಕರೂ ಇರುತ್ತಾರೆ. ಕಳೆದ ಕೆಲ ದಿನಗಳಿಂದಲೂ ಮಳೆ ಇದ್ದ ಕಾರಣ ಈ ಬಾರಿ ಸ್ವಲ್ಪ ಕಡಿಮೆ ಪ್ರಮಾಣದ ಮಾವು ಮತ್ತು ಹಲಸು ತಂದಿದ್ದೇವೆ. ಕೆಂಪು ಹಲಸು, ಹಳದಿ ಹಲಸಿನ ಜತೆಗೆ, ರತ್ನಗಿರಿ ಅಲ್ಫೋನ್ಸೋ, ರಸಪೂರಿ, ಸಿಂದೂರ, ಮಲ್ಗೋವಾ, ಸುಂದರ್ ಶಾ ಸೇರಿದಂತೆ ನಮ್ಮ ತೋಟದಲ್ಲೇ ಬೆಳೆದ 4 ಟನ್ ಮಾವು ಹಾಗೂ 3 ಟನ್ ಹಲಸನ್ನು ಈ ಬಾರಿ ಮಂಗಳೂರಿಗೆ ತಂದಿದ್ದೇವೆ’ ಎಂದು ಧಾರವಾಡದ ರೈತ ಮಲ್ಲಕಾರ್ಜುನ ದೇವೇಂದ್ರಪ್ಪ ರೊಟ್ಟಿಗೆವಾಡ್ ಅವರು ತಿಳಿಸಿದರು.
‘ಪಿಲಿಕುಳದ ಹಣ್ಣುಗಳ ಮೇಳದ ಸಂದರ್ಭ ನಾನು ಪ್ರತಿ ಬಾರಿಯೂ ಮನೆಯಲ್ಲಿ ಬೆಳೆದ ಜೀರಿಗೆ ಮಾವಿನ ಮಿಡಿಯ ಉಪ್ಪಿನಕಾಯಿ ಮನೆಯಲ್ಲಿಯೇ ತಯಾರಿಸಿ ತರುತ್ತೇನೆ. ಕಳೆದ ವರ್ಷ ಜೀರಿಗ ಮಾವು ಸಾಕಷ್ಟು ಸಿಗದೆ ತಂದಿರಲಿಲ್ಲ. ಈ ಬಾರಿ ತಂದಿದ್ದೇನೆ. ಇದಕ್ಕೆ ಬಹಳಷ್ಟು ಬೇಡಿಕೆ ಇದೆ. ಆದರೆ ಮಾರುಕಟ್ಟೆಗೆ ಮಾರಾಟ ಮಾಡುವುದಿಲ್ಲ. ಪಿಲಿಕುಳಕ್ಕಾಗಿಯೇ ಉಪ್ಪಿನಕಾಯಿ ತಯಾರಿಸಿ ತರುತ್ತೇನೆ. ಅದರ ಜತೆ ಉಪ್ಪರ್ ಪಚ್ಚಿಲ್ (ಹಲಸಿನ ತೊಳೆ)ಕೂಡಾ ಮನೆಯಲ್ಲಿ ಮಾಡಿ ತಂದಿದ್ದೇನೆ’ ಎನ್ನುತ್ತಾರೆ ಕಾರ್ಕಳದ ಮಹಿಳೆ ಕಲಾವತಿ.
‘ಕಳೆದ ಸುಮಾರು 7 ವರ್ಷಗಳಿಂದ ಮನೆಯಲ್ಲಿಯೇ ಗೃಹ ಉದ್ಯಮವಾಗಿ ಮಶ್ರೂಮ್ (ಅಣಬೆ) ಬೆಳೆಯುತ್ತಿದ್ದೇನೆ. ಮೀನುಗಾರಿಕಾ ಕಾಲೇಜಿನಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ತರಬೇತಿ ಹೊಂದಿದ ಬಳಿಕ ಅಣಬೆಯೂ ಒಳಗೊಂಡು ಇತರ ನಾನಾ ರೀತಿಯ ತಿಂಡಿ ತಿನಿಸುಗಳನ್ನು ಮೇಳಗಳ ಸ್ಥಳದಲ್ಲಿಯೇ ಮಾಡಿ ಮಾರಾಟ ಮಾಡುತ್ತಿದ್ದೇನೆ. ಮಶ್ರೂಮ್‌ನಿಂದ ಚಕ್ಕುಲಿ, ಸೆಂಡಿಗೆಯಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನೂ ನಾವು ತಯಾರು ಮಾಡಿ ಮಾರಾಟ ಮಾಡುತ್ತಿದ್ದೇವೆ’ ಎಂದು ಮಂಗಳೂರಿನ ತುಷಾರಾ ತಿಳಿಸಿದರು.
‘ಬೆಣ್ಣೆ ಹಣ್ಣು (ಅವಕಾಡೊ) ಬೆಳೆಯುವ ತೋಟವನ್ನು ಲೀಸ್‌ಗೆ ಪಡೆದು ಹಣ್ಣನ್ನು ತಂದು ಮಾರಾಟ ಮಾಡುತ್ತೇವೆ. ಭಾಗಮಂಡಲದಿಂದ ಕಳೆದ ಮೂರು ವರ್ಷಗಳಿಂದ ನಾನು ಪಿಲಿಕುಳ ಹಣ್ಣುಗಳ ಮೇಳಕ್ಕೆ ಬರುತ್ತಿದ್ದೇನೆ. ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿರುವ ಅವಕಾಡೊಗೆ ಮಂಗಳೂರಿನಲ್ಲಿಯೂ ಭಾರೀ ಬೇಡಿಕೆ ಇದೆ. ಈ ಬಾರಿ ಕೆಜಿಗೆ 100 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಇತ್ತೀಚೆಗೆ ಪುತ್ತೂರಿನ ಹಲಸಿನ ಮೇಳದಲ್ಲಿಯೂ ಭಾಗವಹಿಸಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ದೊರಕಿದೆ’ ಎಂದು ಕೊಡಗು ಮೂಲದ ರೈತರೊಬ್ಬರು ತಿಳಿಸಿದರು.
ಮೇಳದಲ್ಲಿ ಹೂವಿನ ಗಿಡಗಳು, ಮಹಿಳೆಯರು ಮತ್ತು ಪುರುಷರ ಉಡುಪುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳ ಮಳಿಗೆಗಳೂ ಪಾಲು ಪಡೆದಿವೆ. ರಂಗ ಚಲನ ತಂಡದಿಂದ ವೃಕ್ಷ ದೇವೋಭವ ಎಂಬ ಬೀದಿ ನಾಟಕ ಪ್ರದರ್ಶಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಮೇಳವನ್ನು ಉದ್ಘಾಟಿಸಿದರು. ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷ ಅನಿಲ್, ಜೈವಿಕ ಉದ್ಯಾನವನದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಕಾರಿ ಪ್ರಶಾಂತ್ ಕುಮಾರ್ ಪೈ, ಪಿಲಿಕುಳದ ಆಡಳಿತಾಧಿಕಾರಿ ಡಾ. ಅಶೋಕ್ ಕೆ. ಆರ್., ಜೈವಿಕ ಉದ್ಯಾನವನದ ಡಾ. ಅಶೋಕ್ ಕೆ.ಆರ್. ಆಡಳಿತಾಧಿಕಾರಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
‘ಪಿಲಿಕುಳ ನಿಸರ್ಗಧಾಮದಲ್ಲಿರುವ ವಿವಿಧ ಮೂಲಸೌಕರ್ಯಗಳನ್ನು ಬಳಕೆ ಮಾಡಿಕೊಂಡು ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ತಿಂಗಳಲ್ಲಿ ಎರಡು ದಿನ ಸಂತೆ ಆಯೋಜಿಸುವ ಚಿಂತನೆ ಇದೆ. ಮಹಿಳಾ ಒಕ್ಕೂಟಗಳು ಸೇರಿದಂತೆ ಗೃಹೋದ್ಯಮಿಗಳ ಉತ್ಪನ್ನಗಳ ಮಾರಾಟ, ಸ್ಥಳೀಯವಾಗಿ ಬೆಳೆಯುವ ಹಣ್ಣು ತರಕಾರಿಗಳ ಮಾರಾಟಕ್ಕೆ ಈ ಸಂತೆಯಲ್ಲಿ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಪಿಲಿಕುಳಕ್ಕೆ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಸ್‌ಗಳ ಸಂಚಾರಕ್ಕೂ ಅವಕಾಶ ಕಲ್ಪಿಸುವಂತೆ ಕೋರಲಾಗಿದೆ.’
-ಡಾ. ಅರುಣ್ ಕುಮಾರ್ ಶೆಟ್ಟಿ, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ದ.ಕ.







