ಬೆಳ್ಮ ಗ್ರಾಮಕ್ಕೆ ಗಾಂಧಿ ಗ್ರಾಮ ಪುರಸ್ಕಾರ

ಉಳ್ಳಾಲ, ಸೆ.28: ಬೆಳ್ಮ ಗ್ರಾಪಂ 2022-23ನೆ ವರ್ಷದಲ್ಲಿ ಸಾಧಿಸಿದ ಜೀವನ ಗುಣಮಟ್ಟ, ಸ್ವಂತ ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯಗಳ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತೆ ಯೋಜನೆಗಳ ಸಹಿತ ಸರಕಾರದ 138 ಪ್ರಶ್ನೆಗಳಿಗೆ ಯಶಸ್ವಿಯಾಗಿ ಪ್ರತಿಕ್ರಿಯಿಸಿದ ಫಲವಾಗಿ 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿವೆ.
2002ರಲ್ಲಿ ಬಯಲು ಬಹಿರ್ದೆಸೆ ಸಮರ್ಪಕವಾಗಿ ಅನುಷ್ಠಾನಗೊಳಿಸಿ ರಾಜ್ಯಮಟ್ಟದಲ್ಲಿ ಪಡೆದ ಪ್ರಥಮ ಪುರಸ್ಕಾರ ವಾಗಿದ್ದು, ಇದೀಗ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬೆಳ್ಮ ಗ್ರಾಮ ಆಯ್ಕೆಯಾಗಿದೆ. ಸ್ವಯಂಪ್ರೇರಿತ ಸಮಗ್ರ ಸಾಮಾಜಿಕ ಆರ್ಥಿಕ ಸಮೀಕ್ಷೆ, ಯಶಸ್ವಿ ಸಂಪೂರ್ಣ ಸ್ವಚ್ಛತಾ ಆಂದೋಲನ, ಜನತಾ ಜೀವ ವೈವಿಧ್ಯ ದಾಖಲಾತಿ ಮತ್ತು ಪ್ರಕಟನೆ, ಕುಡಿಯುವ ನೀರು ಪೂರೈಕೆ ಯೋಜನೆ, ಕೇಂದ್ರೀಕೃತ ಸೋಲಾರ್ ಬೀದಿದೀಪ, ದಾನಿಯಿಂದ ಪಂಚಾಯತ್ ಸೌಧ ನಿರ್ಮಾಣ, ಸುವರ್ಣ ಗ್ರಾಮೋದಯ ಯೋಜನೆ ಮೂಲಕ ಗ್ರಾಮದ ಮೂಲ ಸೌಲಭ್ಯ ವೃದ್ಧಿ, ಆರ್ಥಿಕ ಶಿಸ್ತು ಪಾಲನೆ, ವಸತಿ ಸಭೆ, ವಾರ್ಡ್ ಸಭೆ, ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ದಲಿತ ಗ್ರಾಮಸಭೆಗಳ ಮೂಲಕ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಎಲ್ಲರನ್ನು ಒಳಗೊಳ್ಳುವುದರ ಜತೆಗೆ ಪಾರದರ್ಶಕತೆ, ಉತ್ತರ ದಾಯಿತ್ವ, ಸಾಮಾಜಿಕ ನ್ಯಾಯ ಪಾಲನೆಯಲ್ಲಿ ಉನ್ನತ ಮಟ್ಟದ ಸಾಧನೆಗೆ ಲಭಿಸಿದ ಹಿರಿಮೆ ಇದಾಗಿದೆ ಎಂದು ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಮತ್ತು ಅಭಿವೃದ್ಧಿ ಅಧಿಕಾರಿ ರಮೇಶ್ ನಾಯ್ಕ್ ಹೇಳಿದ್ದಾರೆ.
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬಗ್ಗೆ ಬೆಳ್ಮ ಗ್ರಾಪಂ ಅಧ್ಯಕ್ಷೆ ರಝಿಯಾ, ಮಾಜಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಅಬ್ದುಲ್ ರಝಾಕ್, ಇಕ್ಬಾಲ್ ಹೆಚ್.ಆರ್., ಪುಷ್ಪಾಕಾನೆಕೆರೆ, ಕಾರ್ಯದರ್ಶಿ ವಾಣಿಶ್ರೀ, ಎಫ್‌ಡಿಎ ರಾಜೀವ್ ಡಿ, ಸಂತಸ ವ್ಯಕ್ತಪಡಿಸಿದ್ದಾರೆ.





