ಜನವರಿ ಒಳಗೆ ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ಭಗವಂತ ಖೂಬ

ಮಂಗಳೂರು: ಗಂಜಿ ಮಠ ಪ್ಲಾಸ್ಟಿಕ್ ಪಾರ್ಕ್ ಯೋಜನೆ ಕಾಮಗಾರಿ ತ್ವರಿತಗೊಳಿಸಲು ಮತ್ತು ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ರಾಸಾಯನಿಕ ಮತ್ತು ರಸ ಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಭಗವಂತ ಖೂಬ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಇಂದು ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಹಾಲಿ ಪ್ಲಾಸ್ಟಿಕ್ ಪಾರ್ಕ್ ನ ಯೋಜನೆ ಯ ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಶೇ.70ಕಾಮಗಾರಿ ಪೂರ್ಣ ವಾಗಬೇಕಿತ್ತು. ಆದರೆ ಪ್ರಸ್ತುತ ಕೇವಲ ಶೇ20 ಭಾಗ ಮಾತ್ರ ಆಗಿದೆ. ಈ ಪ್ರಗತಿಯ ವೇಗ ಸಾಲದು ಇನ್ನಷ್ಟು ವೇಗವಾಗಿ ನಡೆದು ಜನವರಿಯಲ್ಲಿ ಯೋಜನೆ ಪೂರ್ಣ ಗೊಳ್ಳಬೇಕು ಎಂದು ಭಗವಂತ ಖೂಬ ತಿಳಿಸಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಅನಂತ್ ಕುಮಾರ್ ಅವರ ಮೂಲಕ ಈ ಪ್ಲಾಸ್ಟಿಕ್ ಪಾರ್ಕ್ ಜಿಲ್ಲೆ ಗೆ ಕೊಡುಗೆ ಯಾಗಿ ದೊರೆತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಸಹಯೋಗದಲ್ಲಿ ಈ ಯೋಜನೆ ಮುಂದಿನ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಪೂರ್ಣ ಗೊಂಡು ಉದ್ಘಾಟನೆಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಶಾಸಕ ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾ ಹಣಾಧಿಕಾರಿ ಡಾ.ಸಿ.ಆನಂದ,ಕೆಐಎಡಿಬಿ ಸಿಇಒ ಡಾ.ಮಹೇಶ್, ಕೆಐಎಡಿಬಿ ಅಧಿಕಾರಿ ವೀರಭದ್ರಯ್ಯ, ಕೆನರಾ ಪ್ಲಾಸ್ಟಿಕ್ ಪಾರ್ಕ್ ಎಸೋಸಿಯೇಶನ್ ಅಧ್ಯಕ್ಷ ನಝೀರ್ , ಕೇಂದ್ರ ಕೈಗಾರಿಕಾ ಕೇಂದ್ರದ ಅಧಿಕಾರಿ ಗೋಕುಲ್ ದಾಸ್ ನಾಯಕ್ ಉಪಸ್ಥಿತರಿದ್ದರು. ಕೆನರಾ ಪ್ಲಾಸ್ಟಿಕ್ ಎಸೋಸಿಯೇಶನ್ ಅಧ್ಯಕ್ಷ ನಝೀರ್ ವಂದಿಸಿದರು.







