ದೇಶದ ನಾಗರಿಕನ ನಾಗರಿಕತ್ವವನ್ನು ತೀರ್ಮಾನ ಮಾಡುವ ಅಧಿಕಾರ ಸರಕಾರಿ ಅಧಿಕಾರಿಗೆ ಇಲ್ಲ: ಹಿರಿಯ ಚಿಂತಕ ಶಿವಸುಂದರ್

ಮಂಗಳೂರು: ಒಬ್ಬ ಸರಕಾರಿ ಅಧಿಕಾರಿ ಈ ದೇಶದ ನಾಗರಿಕನ ನಾಗರಿಕತ್ವವನ್ನು ತೀರ್ಮಾನ ಮಾಡುವ ಯಾವುದೇ ಅಧಿಕಾರವನ್ನು ಹೊಂದಿಲ್ಲ. ನಾಗರಿಕತ್ವವನ್ನು ನಿರ್ಣಯಿಸುವ ಅಧಿಕಾರ ನ್ಯಾಯಾಧಿಕರಣಕ್ಕೆ (ಟ್ರಿಬ್ಯುನಲ್) ಮಾತ್ರ ಇದೆ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.
ಬಾಂಧವ್ಯ, ಸಮೃದ್ಧಿ, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ, ವಿಮೆನ್ ಡಿಸ್ಟ್ರಿಕ್ಟ್ ಫೆಡರೇಶನ್, ಕೆನರಾ ಕಮ್ಯುನಿಕೇಶನ್ ಸೆಂಟರ್, ಡಿಎಸ್‌ಎಸ್, ಕಮಿಷನ್ ಫಾರ್ ಸೋಶಿಯಲ್ ಡೆವಲಪ್‌ಮೆಂಟ್, ಸಿಟಿಜನ್ ಫಾರ್ ಮ್ಯಾಂಗಲೋರ್ ಡೆವಲಪ್‌ಮೆಂಟ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಹೋದಯ ಸಭಾಂಗಣದಲ್ಲಿ ಶನಿವಾರ ನಡೆದ ಮತದಾರರ ಪಟ್ಟಿಯ ‘ನನ್ನ ಮತ ನನ್ನ ಹಕ್ಕು’ ತೀವ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಕುರಿತು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಎಸ್‌ಐಆರ್ ಮೂಲಕ ದಾಖಲೆ ಕೊಟ್ಟು ಈ ದೇಶದ ನಾಗರಿಕ ಎನ್ನುವುದನ್ನು ನಾವು ಸಾಬೀತು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್‌ಐಆರ್ ನಮ್ಮ ದೇಶದ ಕಾನೂನಿಗೆ ವಿರುದ್ಧವಾಗಿದೆ ಎಂದರು.
ಎಸ್‌ಐಆರ್ ಉದ್ದೇಶ ಕೇವಲ ಮತಪಟ್ಟಿಯ ತೀವ್ರ ಪರಿಷ್ಕರಣೆ ಮಾತ್ರವಾಗಿದ್ದರೆ ಇದಕ್ಕೆ ಯಾರ ವಿರೋಧ ಇರುತ್ತಿ ರಲಿಲ್ಲ. ಆದರೆ ಹಿಂದಿನ ಉದ್ದೇಶ ಉದ್ದೇಶ ಸರಿಯಾಗಿಲ್ಲ . ಈಗಾಗಲೇ ಎಸ್‌ಐಆರ್ ಪ್ರಕ್ರಿಯೆ ಮುಗಿದಿರುವ ಪಶ್ಚಿಮ ಬಂಗಾಳದಲ್ಲಿ, ರಾಜಸ್ಥಾನದಲ್ಲಿ ಕಂಡುಬಂದಿರುವ ಪ್ರಮುಖ ವಿಚಾರವೆಂದರೆ ಇದೊಂದು ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಮೇಲೆ ಟಾರ್ಗೆಟ್ ಆಗಿರುವಂತೆ ಕಂಡು ಬರುತ್ತಿದೆ. ಅವರು ತಮ್ಮ ನಾಗರಿಕತ್ವಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳನ್ನು ಕೊಟ್ಟರೂ ತೃಪ್ತಿಕರವಾಗುವುದಿಲ್ಲ . ಬಿಎಲ್‌ಒ ವರದಿಯನ್ನಧರಿಸಿ ಇಆರ್‌ಒ ವಿಚಾರಣೆಯ ನಾಟಕವಾಡಿ ನಾಗರಿಕ ಅಲ್ಲ ಎಂದು ನಿರ್ಧಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.
1995ರಲ್ಲಿ ಪೊಲೀಸರ ವರದಿಯನ್ನು ಆಧರಿಸಿ ಚುನಾವಣಾ ಆಯೋಗವು ಹಲವು ಮಂದಿಯನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಿರುವ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಲ್ಲಿ ಒಬ್ಬನನ್ನು ಈ ದೇಶದ ನಾಗರಿಕ ಹೌದೊ ಅಥವಾ ಅಲ್ಲವೋ ಎನ್ನುವುದನ್ನು ತೀರ್ಮಾನ ಮಾಡುವ ಅಧಿಕಾರ ಟ್ರೆಬ್ಯುನಲ್‌ಗೆ ಮಾತ್ರ ಇದೆ. ಇದೊಂದು ಜ್ಯುಡಿಶಿಯಲ್ ಪ್ರಕ್ರಿಯೆ ಮೂಲಕ ಆಗಬೇಕಾಗಿದೆ ಎಂದು ಸ್ಪಷ್ಟಪಡಿಸಿದೆ ಎಂದು ನುಡಿದರು.
ಎಸ್‌ಐಆರ್ ಎನ್ನುವುದು ಸಂವಿಧಾನದಲ್ಲಿ ಇಲ್ಲದ ಮೋದಿ ಸರಕಾರ ರೂಪಿಸಿರುವ ವಿಶೇಷ ಪ್ರಕ್ರಿಯೆ ಆಗಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಬಿಜೆಪಿಗೆ ವೋಟು ಹಾಕದವರನ್ನು ಹೊರಗಟ್ಟುವ ಮೂಲಕ ತಮ್ಮಲ್ಲಿರುವ ಅಧಿಕಾರವನ್ನು ಶಾಶ್ವತ ವಾಗಿ ಉಳಿಸುವುದು ಇದರ ಉದ್ದೇಶ ಆಗಿದೆ ಎಂದು ಆರೋಪಿದರು.
ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಇದ್ದಷ್ಟು ದಿನ ಬಿಜೆಪಿಗೆ ಗೆಲ್ಲುವುದು ಕಷ್ಟ. ಹೀಗಾಗಿ ಅಧಿಕಾರದ ರಕ್ಷಣೆಗೆ ಇಂತಹ ದಾರಿಯನ್ನು ಕಂಡುಕೊಂಡಿದೆ. ದೇಶದ ನಾಗರಿಕತ್ವ ಕಳೆದುಕೊಂಡರೆ ಒಬ್ಬನಿಗೆ ಬದುಕು ಕಷ್ಟವಾಗುತ್ತದೆ. ಭೌತಿಕವಾಗಿ ಅಲ್ಲದಿದ್ದರೂ ನಾಗರಿಕತ್ವವನ್ನು ಕಿತ್ತುಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಸಿವಿಲ್ ಡೆತ್. ಇಂತಹ ಅಪಾಯಕಾರಿ ಎಸ್‌ಐಆರ್ ರದ್ದಾಗಬೇಕು ಇದರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನ ಅಗತ್ಯ ಎಂದರು.
ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಕ್ಲಿಪ್ಟನ್ ಡಿ ರೊಝಾರಿಯೊ ಮಾತನಾಡಿ ಎಸ್‌ಐಆರ್ ಪೂರ್ವಭಾವಿ ಮಾಪಿಂಗ್ ಕರ್ನಾಟಕದಲ್ಲಿ ಶುರು ಅಗಿದೆ. ಶೇ50ರಿಂದ 58 ಆಗಿದೆ. ಎಸ್‌ಐಆರ್ ಹಿಂದಿನ ರಾಜಕೀಯ, ಕೋಮುವಾದ , ಜಾತಿವಾದ ದೃಷ್ಟಿ ಕೋನವನ್ನು ಜನರ ಮುಂದಿಡಬೇಕು ಎಂದರು.
ಎಸ್‌ಐಆರ್ ಕರ್ನಾಟದಲ್ಲಿ ಜಾರಿಯಾಗುವುದು ಖಚಿತ. ಇದನ್ನು ನಾವು ವಿರೋಧಿಸಬೇಕು. ಈ ಬಗ್ಗೆ ಜಾಗೃತರಾಗಿ ನಮ್ಮ ಹಕ್ಕನ್ನು ರಕ್ಷಣೆ ಮಾಡುವುದಕ್ಕಾಗಿ ಹೋರಾಡಬೇಕು ಎಂದು ನುಡಿದರು.
ಪಿಯುಸಿಎಲ್‌ನ ಐಶ್ವರ್ಯ ಮಾತನಾಡಿ ಈಗಾಗಲೇ ಎಸ್‌ಐಆರ್ ಆಗಿರುವ 9 ರಾಜ್ಯಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಅಂಡಮಾನ್ ನಿಕೋಬಾರ್‌ನಲ್ಲಿ ಗರಿಷ್ಠ ಮಂದಿ ಮತಪಟ್ಟಿಯಿಂದ ಹೊರಗುಳಿಯುವಂತಾಗಿದೆ. 20 ಸಾವಿರ ಮಂದಿಯ ಹೆಸರು ಮತಪಟ್ಟಿಯಿಂದ ಕಿತ್ತುಹಾಕಲಾಗಿದೆ ಎಂದು ಹೇಳಿದರು.
ಎಸ್‌ಐಆರ್ ವಿಚಾರದಲ್ಲಿ ಬಿಎಲ್‌ಗೆ ಸರಿಯಾಗಿ ತರಬೇತಿ ಇಲ್ಲದೆ ಸಮಸ್ಯೆ ಆಗಿದೆ. ಅವರು ಒತ್ತಡದಿಂದ ಕೆಲಸ ಮಾಡುವಂತಾಗಿದೆ ಎಂದು ಹೇಳಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಮಾಜಿ ಮೇಯರ್ ಕೆ.ಅಶ್ರಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಕೀಲರಾದ ವಿನೋದ್ ಮಸ್ಕರೇನಸ್ ಸ್ವಾಗತಿಸಿ, ವಂದಿಸಿದರು.







