ಮೆಲ್ಕಾರ್ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮ

ಬಂಟ್ವಾಳ, ಸೆ.17: ಮಾರ್ನಬೈಲ್ ನಲ್ಲಿರುವ ಮೆಲ್ಕಾರ್ ಪದವಿ ಕಾಲೇಜಿನ ಒಂಭತ್ತನೇ ವಾರ್ಷಿಕ ಪದವಿ ಪ್ರದಾನ ಕಾರ್ಯಕ್ರಮ ಶನಿವಾರ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಎ.ಎಂ.ಖಾನ್ ಮಾತನಾಡಿ, ಪದವಿ ಎಂಬುದು ನಿಮ್ಮ ಕಲಿಕೆಯ ಅಂತ್ಯವಲ್ಲ, ಅದೊಂದು ಹಂತ ಮಾತ್ರ. ಆದುದರಿಂದ ಪ್ರತಿಯೊಬ್ಬರು ಸದಾ ತಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಪುಸ್ತಕಗಳನ್ನು ಓದುವುದರೊಂದಿಗೆ, ಪತ್ರಿಕೆಗಳು, ವಾರ್ತೆಗಳು ಮತ್ತು ಇತರ ಮಾಹಿತಿಗಳನ್ನು ಕಲೆ ಹಾಕುತ್ತಾ ತಮ್ಮ ಮಸ್ತಕವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಮಾತನಾಡಿ,
ಕಲಿಕೆಯೊಂದಿಗೆ ಶಿಸ್ತು, ದೇಶಾಭಿಮಾನ, ಸಾಮರಸ್ಯದ ಬದುಕು, ರೂಢಿಸಿಕೊಂಡು ವ್ಯಕ್ತಿತ್ವ ವಿಕಸನವನ್ನು ಮಾಡಿಕೊಂಡು, ಸಮಾಜದಲ್ಲಿ ಸಭ್ಯ ನಾಗರಿಕರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಬಿ.ಕೆ.ಅಬ್ದುಲ್ಲತೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದವಿ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿರುವ ಬಿಕಾಂ. ವಿಭಾಗದ ರಶೀನಾ ಹಾಗೂ ಬಿ.ಎ. ವಿಭಾಗದ ಫಾತಿಮಾ ಫರ್ವೀನಾರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಒಟ್ಟು 64 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು.
ವಿದ್ಯಾರ್ಥಿನಿಯರಾದ ನಝ್ಮಿಯಾ ಜಾಸ್ಮಿನ್ ಸ್ವಾಗತಿಸಿದರು. ಪಿ.ಝುಬೈದಾ ಸಲ್ಹಾ ಕಾರ್ಯಕ್ರಮ ನಿರೂಪಿಸಿದರು. ನುಸೈಬ ಬಾನು ವಂದಿಸಿದರು.







