ಕೊಣಾಜೆಯಲ್ಲಿ ಗುರು-ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ದತೆ

ಕೊಣಾಜೆ : ಬ್ರಹ್ಮಶ್ರೀ ನಾರಾಯಣ ಗುರುಗಳ ಮತ್ತು ಮಹಾತ್ಮ ಗಾಂಧೀಜಿಯವರ ಐತಿಹಾಸಿಕ ಸಂವಾದ ಶತಮಾನೋತ್ಸವವು ಡಿ.3 ರಂದು ಪಕ್ಷಾತೀತವಾಗಿ, ಎಲ್ಲಾ ಧರ್ಮದ ಜನರ ಸಹಕಾರ,ಭಾಗವಹಿಸುವಿಕೆಯೊಂದಿಗೆ ಕೊಣಾಜೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮವು ಇತಿಹಾಸದ ಪುಟದಲ್ಲಿ ದಾಖಲಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ಅವರು ಕೊಣಾಜೆಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡುತ್ತಾ, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಕೆ.ಸಿ.ವೇಣುಗೋಪಾಲ್ ಸೇರಿದಂತೆ, ಸ್ವಾಮೀಜಿಗಳು, ಗಣ್ಯರು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದು, ಇದಕ್ಕೆ ಪೂರಕವಾಗಿ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಈ ಐತಿಹಾಸಿಕ ಕಾರ್ಯಕ್ರಮವು ನಮ್ಮಸಮಾಜದ ಯುವ ಜನಾಂಗ, ವಿದ್ಯಾರ್ಥಿ ಸಮುದಾಯ, ಮಕ್ಕಳಿಗೆ ಜನಜಾಗೃತಿ ಹಾಗೂ ಮುಂದಿನ ದಿನಗಳಲ್ಲಿ ಸೌಹಾರ್ದ ಸಮಾಜವನ್ನು ಕಟ್ಟಲು ಹಾಗೂ ಸಂತರ, ಮಹಾಪುರುಷರ ತತ್ವಾದರ್ಶಗಳನ್ನು ಅರ್ಥೈಸಿ, ಮೈಗೂಡಿಸಿಕೊಳ್ಳಲು ಸಹಕಾರಿಯಾಗಲಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಿ ಎಂದರು.
ಕಾರ್ಯಕ್ರಮದ ಸಂಚಾಲಕರಾದ ರಕ್ಷಿತ್ ಶಿವರಾಮ್ ಅವರು ಮಾತನಾಡಿ, ಈ ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲಾ ಗ್ರಾಮದ ಜನರು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ನಾರಾಯಣ ಗುರುಗಳ ಅಧ್ಯಯನ ಪೀಠ ಕೊಣಾಜೆಯಲ್ಲಿರುವುದರಿಂಮದ ಕಾರ್ಯಕ್ರಮವನ್ನು ಕೊಣಾಜೆಯಲ್ಲೇ ಆಯೋಜಿಸಲಾಗಿದ್ದು ಇದೊಂದು ಸೌಹಾರ್ದತೆಯ ಸಂಭ್ರಮವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೇರಳ ತಿರುವನಂತಪುರ ಶಿವಗಿರಿ ಮಠ ವರ್ಕಳದ ಜ್ಞಾನತೀರ್ಥ ಸ್ವಾಮೀಜಿ, ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರಿ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕೊಣಾಜೆ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್, ಮಾಧ್ಯಮ ಸಂಯೋಜಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ, ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ, ಡಾ.ನಾಗಪ್ಪ ಗೌಡ, ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಕೊಣಾಜೆ ಪಂಚಾಯತ್ ಮಾಜಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ, ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಜಯರಾಜ್, ಮುಖಂಡರಾದ ಎನ್ ಎಸ್ ಕರೀಂ, ಟಿ.ಎಸ್. ಅಬ್ದುಲ್ಲಾ, ಅಬ್ದುಲ್ ರಹಿಮಾನ್ ಕೋಡಿಜಾಲ್, ರವೀಂದ್ರ ಬಂಗೇರ, ಎ.ಕೆ. ರಹಿಮಾನ್ ಕೋಡಿಜಾಲ್, .ಎಂ.ಪಾರೂಕ್ , ಸತ್ಯಜಿತ್ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.
ವಿವಿ ಮೈದಾನದಲ್ಲಿ ಭರದ ಸಿದ್ಧತೆ:
ಐತಿಹಾಸಿಕ ಸಂವಾದ ಶತಮಾನೋತ್ಸವದ ಕಾರ್ಯಕ್ರಮಕ್ಕಾಗಿ ಮಂಗಳೂರು ವಿವಿ ಕ್ಯಾಂಪಸ್ ನ ಕೊಣಾಜೆಯ ವಿಶಾಲವಾದ ಮೈದಾನದಲ್ಲಿ ಸಕಲ ಸಿದ್ಧತೆಯನ್ನು ಮಾಡಲಾಗುತ್ತಿದ್ದು, ಈಗಾಗಲೇ ಜರ್ಮನ್ ಶೈಲಿಯ ವಿಶಾಲವಾದ ಪೆಂಡಲ್ ಅಳವಡಿಸಲಾಗಿದ್ದು, ಆಸನ ವ್ಯವಸ್ಥೆಯನ್ನು ಜೋಡಿಸಿಡಲಾಗಿದೆ. ಅಲ್ಲದೆ ಮೈದಾನ ಮತ್ತೊಂದು ಭಾಗದಲ್ಲಿ ಊಟಪೋಚಾರ ವ್ಯವಸ್ಥೆಗಾಗಿ ಸಿದ್ದತೆಯನ್ನು ಮಾಡಲಾಗುತ್ತಿದೆ.
ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾವಿರಾರು ಜನರ ವಾಹನವನ್ನು ಪಾರ್ಕಿಂಗ್ ಮಾಡಲು ವಿಶ್ವಮಂಗಳ ಶಾಲಾ ಮೈದಾನ, ವಿವಿಯ ಮೈದಾನ ಸೇರಿದಂತೆ ಇನ್ನಿತರ ಜಾಗಗಳನ್ನು ಗುರುತಿಸಿಡಲಾಗಿದೆ.
ಅಲ್ಲದೆ ಕಾರ್ಯಕ್ರಮ ನಡೆಯುವ ಮೈದಾನದ ಸುತ್ತ ಗಿಡಗಂಟಿಗಳನ್ನು ಕಡಿದು ಪರಿಸರ ಶುಚಿ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ.
ಇಪ್ಪತ್ತು ಸಾವಿರ ಜನ ನಿರೀಕ್ಷೆ:
ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇರಳ ಸೇರಿದಂತೆ ಇತರ ಕಡೆಗಳಿಂದ ಸುಮಾರು ಇಪ್ಪತ್ತೂ ಸಾವಿರಕ್ಕೂಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಆಯೋಜಕರು ನಿರೀಕ್ಷೆ ಇಟ್ಟುಕೊಂಡಿದ್ದು, ಭಾಗವಹಿಸಿದವರಿಗೆ ಚಾ ತಿಂಡಿ ಹಾಗೂ ಊಟೋಪಾಚಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.
ಅಲ್ಲದೆ ಕಾರ್ಯಕ್ರಮಗಳಿಗೆ ಬರುವ ಗಣ್ಯ ಅತಿಥಿಗಳಿಗೆ ಮತ್ತು ಕಾರ್ಯಕ್ರಮಕ್ಕೆ ಶುಭಕೋರಿ ಈಗಾಗಲೇ ಮಂಗಳೂರಿನಿಂದ ಕೊಣಾಜೆಯುದ್ದಕ್ಕೂ ರಸ್ತೆ ಬದಿಗಳಲ್ಲಿ ಕಟೌಟ್ ಬ್ಯಾನರ್ ಗಳು ರಾರಾಜಿಸುತ್ತಿವೆ.







