ಬದುಕಿನ ಔನ್ನತ್ಯಕ್ಕೆ ಗುರುಹಿರಿಯರ ಮಾರ್ಗದರ್ಶನ ಅವಶ್ಯ: ಗಿರೀಶ್ ಎಸ್.

ಸುರತ್ಕಲ್ : ಬದುಕಿನ ಔನ್ನತ್ಯಕ್ಕೆ ಗುರುಹಿರಿಯರ ಮಾರ್ಗದರ್ಶನದ ಪ್ರೇರಣೆಯೇ ಪ್ರಮುಖ ಕಾರಣ. ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿ ಬದುಕು ರೂಪಿಸುವ ಶಿಕ್ಷಣ ಸಂಸ್ಥೆಗಳ ಮೇಲೆ ಅಭಿಮಾನವಿರಿಸಿ, ಅವುಗಳನ್ನು ಬೆಂಬಲಿಸಬೇಕು ಎಂದು ಎಂಸಿಎಫ್ ಸಂಸ್ಥೆಯ ಸಿ.ಎಂ.ಒ ಗಿರೀಶ್ ಎಸ್. ಹೇಳಿದರು.
ಅವರು ಸುರತ್ಕಲ್ ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಮತ್ತು ಸುರತ್ಕಲ್ ರೋಟರಿ ಕ್ಲಬ್‌ನ ಸಹಯೋಗದಲ್ಲಿ ಎಂಸಿಎಫ್ ಸಂಸ್ಥೆಯ ಪ್ರಯೋಜಕತ್ವದಲ್ಲಿ ನಿರ್ಮಿಸಲಾದ ಮಿಯಾವಾಕಿ ಅರಣ್ಯ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಯೋಜನೆಯಡಿ ಸುಮಾರು 835 ವಿಧದ ಗಿಡಗಳು ನೆಡಲಾಗಿದೆ.
ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ನಾವು ನಿರ್ಮಿಸಿದ ಈ ಮಿಯಾವಾಕಿ ಅರಣ್ಯವನ್ನು ಕಾಪಾಡಿ, ಶ್ರೇಷ್ಠ ರೀತಿಯಲ್ಲಿ ಉಪಯೋಗಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಶಿಧರ ಜಿ.ಎಸ್., ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಮತ್ತು ಊರವರ ಸಹಕಾರ ದೊರಕಿದರೆ ಸರ್ಕಾರಿ ಶಾಲೆಗಳನ್ನೂ ಖಾಸಗಿ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬುದಕ್ಕೆ ಸುರತ್ಕಲ್ ಮಧ್ಯ ಶಾಲೆ ಉತ್ತಮ ಉದಾಹರಣೆ ಎಂದು ಹೇಳಿದರು.
ಶಾಲೆಯ ಟ್ರಸ್ಟ್ ಹಾಗೂ ಉದ್ಯಮಿಗಳಿಗೆ ಅಭಿನಂದನೆ ಸಲ್ಲಿಸಿ, ಶಿಕ್ಷಣ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ರಾಜ್ ಮೋಹನ್ ರಾವ್ ವಹಿಸಿದ್ದರು.
ವೇದಿಕೆಯಲ್ಲಿ ಎಂ.ಸಿ.ಎಫ್ ಸಂಸ್ಥೆಯ ಎಚ್ ಆರ್ ವಿಭಾಗದ ಜಿ.ಜಿ.ಎಂ. ಚೇತನ್ ಮೆಂಡೋನ್ಸ್, ಚೇಳಾಯರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಚೇಳಾಯರು, ರೋ.ಸಂದೀಪ್ ರಾವ್ ಇಡ್ಯಾ, ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷರಾದ ರಾಮಚಂದ್ರ ಕುಂದರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ, ಉಪಾಧ್ಯಕ್ಷ ಅನಿಲ್ ಸಾಲ್ಯಾನ್, ಸದಸ್ಯರಾದ ಪ್ರಕಾಸ್ ಶೆಟ್ಟಿ, ಸವಿತಾ ಕುಲಾಲ್,ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ವಿಠಲ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರಕಾಸ್ ಶೆಟ್ಟಿ, ರಿತೇಶ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಜೇನ್ ಡಿಸೋಜಾ,ಶಿಕ್ಷಕಿ ಶೈಲಾ ಮುಂತಾದವರು ಉಪಸ್ಥಿತರಿದ್ದರು.
ಸುರತ್ಕಲ್ ನಾಗರಿಕ ಸಲಹಾ ಸಮಿತಿ ಕಾರ್ಯದರ್ಶಿ ಸತೀಶ್ ಸದಾನಂದ ಸ್ವಾಗತಿಸಿದರು.







