ಹಳೆಯಂಗಡಿ | ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಂ.ಹನೀಫ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜೈಕೃಷ್ಣ ಕೋಟ್ಯಾನ್‌ಗೆ ಹುಟ್ಟೂರ ಸನ್ಮಾನ

ಹಳೆಯಂಗಡಿ: ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟ ಇದರ ಆಶ್ರಯದಲ್ಲಿ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಎಂ.ಹನೀಫ್ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತರಾದ ಜೈಕೃಷ್ಣ ಕೋಟ್ಯಾನ್ ಅವರಿಗೆ ಹುಟ್ಟೂರ ಸನ್ಮಾನ ಸಮಾರಂಭವು ಹಳೆಯಂಗಡಿ ಬಿಲ್ಲವ ಭವನದಲ್ಲಿ ರವಿವಾರ ನಡೆಯಿತು.
ಸಮಾರಂಭವನ್ನು ಬೊಳ್ಳೂರು ಜುಮಾ ಮಸೀದಿಯ ಮುದಗ್ರಿಸ್ ಮುಹಮ್ಮದ್ ಶರೀಫ್ ಅರ್ಶದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರತಿಭಾನ್ವಿತರಿಗೆ ಯಾವುದೇ ಸನ್ಮಾನ ಗೌರವಕ್ಕಿಂತಲೂ ಹುಟ್ಟೂರಿನಲ್ಲಿ ನಡೆಯುವ ಸಾಸಿವೆ ಗಾತ್ರದ ಸನ್ಮಾನವಾದರೂ ಅದು ಬಹುದೊಡ್ಡ ಬೆಲೆಬಾಳುವ ಸನ್ಮಾನ ಎಂದು ನುಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎಂ.ಹನೀಫ್, ರಾಜ್ಯದ ಹಲವೆಡೆ ಸನ್ಮಾನ ಸ್ವೀಕರಿಸಿದ್ದೇನೆ. ಆದರೆ ಹುಟ್ಟೂರಿನ ಸನ್ಮಾನ ನೀಡುವಷ್ಟು ಸಂತೋಷ ಇನ್ನೊಂದಿಲ್ಲ ಎಂದ ಅವರು, ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಜೈಕೃಷ್ಣ ಕೋಟ್ಯಾನ್ ಅವರು ಮಾತನಾಡಿ, ಪೂಜಾ ಸಂಸ್ಥೆಯ ಸಮಾಜಿಕ ಕಾರ್ಯಗಳನ್ನು ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಇದರಲ್ಲಿ ನನ್ನ ಸಂಸ್ಥೆಯ ಜೊತೆಗೆ ಊರಿನ ಎಲ್ಲರ ಸಹಕಾರ ಇದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಇರ್ಷಾದ್ ಕದಿಕೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ಲಾ ಝನಿ ಬಡಗನ್ನೂರು ಅಭಿನಂದನಾ ನುಡುಗಳನ್ನಾಡಿದರು.
ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಹಳೆಯಂಗಡಿ ಅಮ್ಮಾನ್ ಮೆಮೋರಿಯಲ್ ಚರ್ಚ್ ನ ಧರ್ಮಗುರು ರೆಫಾ ಅಮೃತ್ ರಾಜ್ ಖೋಡೆ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾನಿಲ್ ಮಾತನಾಡಿ ಸನ್ಮಾನಿತರಿಗೆ ಶುಭಹಾರೈಸಿದರು.
ಸಮಾರಂಭದಲ್ಲಿ ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಕುಡುಂಬೂರು ಸಾಗ್, ಬೊಳ್ಳೂರು ಜುಮಾ ಮಸೀದಿಯ ಅಧ್ಯಕ್ಷ ಬಿ.ಇ.ಮುಹಮ್ಮದ್, ಇಂದಿರಾನಗರ ತಖ್ವಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಲತೀಫ್ ಲೈಟ್ಹೌಸ್, ಸಾಗ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಸಾಗ್, ತೋಕೂರು ಜುಮಾ ಮಸೀದಿಯ ಅಧ್ಯಕ್ಷ ಅಲ್ತಾಫ್ ಹುಸೇನ್ ಮೆಹೆತಾಬ್, ಹಳೆಯಂಗಡಿ ಸಂತೆಕಟ್ಟೆ ಹಿಮಾಯತುಲ್ ಇಸ್ಲಾಂ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಪಡುತೋಟ ಮೊದಲಾದವರು ಉಪಸ್ಥಿತರಿದ್ದರು.
ಹಳೆಯಂಗಡಿ ವಲಯ ಮುಸ್ಲಿಮ್ ಜಮಾತ್ ಒಕ್ಕೂಟದ ಕಾರ್ಯದರ್ಶಿ ವಾಹಿದ್ ತೋಕೂರು ಸ್ವಾಗತಿಸಿದರು. ಮೊಯ್ದೀನ್ ಬೊಳ್ಳೂರು ಕಾರ್ಯಕ್ರಮ ನಿರೂಪಿಸಿದರು.







