ಮಂಗಳೂರಿನಲ್ಲಿ ಸೌಹಾರ್ದ ಉಳಿಯಬೇಕು, ಕೋಮುದ್ವೇಷ ಅಳಿಯಬೇಕು: ನವೀನ್ ಪಡೀಲ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೌಹಾರ್ದತೆಗೆ ಸಂಬಂಧಿಸಿದ ಸಿನಿಮಾ ‘ನೆರೆ ಕೆರೆ’ ಹೊರಬರಲಿದೆ ಎಂದು ತುಳು ರಂಗಭೂಮಿ ಹಾಗೂ ಸಿನಿಮಾ ನಟ ನವೀನ್.ಡಿ.ಪಡೀಲ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ಮಂಗಳೂರು ಸೌಹಾರ್ದತೆಯ ಊರು, ಬುದ್ಧಿವಂತರ ಊರು. ಆದರೆ ಈಗ ಜಾತಿ ಗಲಾಟೆ, ಕೋಮು ಗಲಭೆ ನಡೆಯುತ್ತಾ ಹೋದರೆ ಇಲ್ಲಿ ಬದುಕು ಕಷ್ಟವಾಗಬಹುದು. ಯುವ ಜನರ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮಂಗಳೂರಿನ ಸೌಹಾರ್ದ ಉಳಿಯಬೇಕು. ಕೋಮುದ್ವೇಷ ಅಳಿಯಬೇಕು.ಈಗ ಇರುವ ಗೊಂದಲದ ವಾತಾವರಣವನ್ನು ನಾವು ಸರಿ ಮಾಡಬೇಕು. ಸೌಹಾರ್ದತೆಯ ಸಿನೆಮಾಕ್ಕೆ ಶಶಿರಾಜ್ ರಾವ್ ಕಾವೂರು ಕಥೆ , ಸಂಭಾಷಣೆ ಬರೆದಿದ್ಧಾರೆ. ಎಂದರು.
ಹಿಂದು,ಮುಸ್ಲಿಂ ಮತು ಕ್ರೈಸ್ತರು ಹೀಗೆ ಎಲ್ಲರೂ ಹೊಂದಾಣಿಕೆಯಿಂದ ಇದ್ದರೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.
ರಾಜಕೀಯ ಬೇಕು . ಆದರೆ ಓಟು ಪಡೆಯಲು ಇನ್ನೊಬ್ಬರಿಗೆ ತೊಂದರೆ ಮಾಡಬಾರದು, ಓಟಿನ ರಾಜಕೀಯದಿಂದಾಗಿ ಅಮಾಯಕರು ಸಾಯುವುದು ನಿಲ್ಲಬೇಕು ಎಂದರು.
ಕಲಾವಿದನಿಗೆ ಶಿಕ್ಷಣ ದೊಂದಿಗೆ ತನ್ನ ಸುತ್ತಮುತ್ತಲಿನ ಪರಿಸರದ ಜನರ ಪ್ರೊತ್ಸಾಹ ಅಗತ್ಯ. ಸೌಹಾರ್ದತೆಯ ಪರಿಸರದಲ್ಲಿ ಬೆಳೆದವನು ನಾನು. ನನ್ನಲ್ಲಿರುವ ಕಲಾ ಪ್ರತಿಭೆಯ ಬೆಳವಣಿಗೆಗೆ ಎಲ್ಲ ಜಾತಿ, ಧರ್ಮದವರು ಸಹಕಾರ ನೀಡಿದ್ದಾರೆ. ನಾನು ಶಿಕ್ಷಣ ಸಂಸ್ಥೆ ಯಲ್ಲಿ ಶಿಕ್ಷಣ ಪಡೆದದ್ದು ಕಡಿಮೆ, ಎಲ್ಲರೊಂದಿಗೆ ಸೇರಿದ ಕಾರಣದಿಂದಾಗಿ,ಹೊಂದಾಣಿಕೆಯ ಪ್ರಭಾವದಿಂದಾಗಿ ಉತ್ತಮ ಸಂಸ್ಕಾರ ನನ್ನಲ್ಲಿ ಬೆಳೆಯಿತು. ನನಗೆ ವಿದ್ಯಾರ್ಥಿ ದಿಸೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ನೇಹಿತರು ಜಾಸ್ತಿ ಇದ್ದರು. ಏಳನೇ ತರಗತಿಯ ಲ್ಲಿರುವಾಗಲೇ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಮನರಂಜನೆ ನೀಡಲು ಸಾಂತಾಕ್ಲಾಸ್ ಪಾತ್ರದ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡೆ.ಇದು ವೇದಿಕೆಯಲ್ಲಿ ನನ್ನಲ್ಲಿ ಧೈರ್ಯ ತುಂಬಿತು. ಸಾಂತಾ ಕ್ಲಾಸ್ ಅಜ್ಜನ ಪಾತ್ರ ಈಗಿನಂತೆ ಮುಖವಾಡ ಅಲ್ಲ.ಒರಿಜಿನಲ್ ಅಜ್ಜನ ವೇಷ ಗಮನ ಸೆಳೆಯಿತು. ಮುಂದೆ ನಾಟಕದ ಸಣ್ಣ ಸಣ್ಣ ಪಾತ್ರದ ಮೂಲಕ ದೊಡ್ಡ ದೊಡ್ಡ ನಾಟಕ ತಂಡಗಳ ಪರಿಚಯ ಆಯಿತು. ನಾಟಕರಾದ ಜಿ.ಕೆ.ಪುರುಷೋತ್ತಮ ಮತ್ತು ವಿಠಲ ಶೆಟ್ಟಿ ಕನಕವಾಡಿ ನನ್ನ ಗುರುಗಳು ಎಂದರು.
ವಿಜಯಕುಮಾರ್ ಕೊಡಿಯಾಲಬೈಲ್ ಅವರ ‘ಒಂಜಿ ನಿಮಿಷ’ ನಾಟಕದಲ್ಲಿ ಕೃಷ್ಣಪ್ಪನ ಪಾತ್ರವು ಜನರಿಗೆ ಮುಟ್ಟಿತು. ಆಗ ನನಗೆ 20ರ ಹರೆಯ. ನನ್ನ ಬಾಲ್ಯದ ನಾಟಕ ಬದುಕಿನಲ್ಲಿ ಅಜ್ಜನ ಪಾತ್ರ ಮಾಡಿದ್ದೆ ಹೆಚ್ಚು. ನಾಟಕಗಳಲ್ಲಿ ಹಾಸ್ಯದೊಂದಿಗೆ ಜನರಿಗೆ ಸಂದೇಶ ನೀಡುವ ನಿಟ್ಟಿನಲ್ಲಿ ಶ್ರಮಿಸಿದ್ದೆ. ನಾಟಕದಲ್ಲಿ ಪ್ರೇಕ್ಷಕರನ್ನು ನಗಿಸಿದಷ್ಟೇ ಅಳುವಂತೆ ಮಾಡಿದ್ದೆ.ಆಗ ನಾಟಕಕ್ಕೆ ಒಂದು ಚೌಕಟ್ಟು ಇತ್ತು.ಪ್ರೇಕ್ಷಕರಿಗೆ ಸಂದೇಶ ಕೊಡುವಾಗ ಹಾಸ್ಯ ಮಾಡಬಾರದು ಎಂದರು. ಈಗಂತೂ ಹಾಸ್ಯ ಮಾಡಲು ಭಯವಾಗುತ್ತದೆ.ನೈಜ ಹಾಸ್ಯಕ್ಕೆ ಬೆಲೆ ಇಲ್ಲ. ತುಳು ಚಿತ್ರ ರಂಗದಲ್ಲಿ ಪರಿವರ್ತನೆ ಆಗಬೇಕು. ಕೇವಲ ಹಾಸ್ಯವನ್ನು ಆಧರಿಸಿ ಮುನ್ನಡೆದರೆ ತುಳು ಚಿತ್ರ ರಂಗಕ್ಕೆ ಭವಿಷ್ಯ ಇಲ್ಲ. ಅಡೂರು ಗೋಪಾಲಕೃಷ್ಣ ಅವರ ವಿಧೇಯನ್ ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದು ನನ್ನ ಸಿನಿಮಾ ಬದುಕಿಗೆ ಹೊಸ ತಿರುವು ನೀಡಿತು ಎಂದರು.
ತುಳು ಚಿತ್ರ ರಂಗ ಬೆಳವಣಿಗೆಯ ಹಾದಿಯಲ್ಲಿದೆ.ಆದರೆ ಇವತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಕಲಾವಿದರ ಹೊಟ್ಟೆ ತುಂಬುತ್ತದೆ.ಹೀಗಿದ್ದರೂ ನಿರ್ಮಾಪಕ ಕೈ ಸುಟ್ಟುಕೊಳ್ಳುವಂತಾಗಿದೆ. ಆದರೆ ಅವರು ತುಳು ಚಿತ್ರ ರಂಗವನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ .ಆರ್. , ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ , ಮಾಜಿ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಕಾರ್ಯದರ್ಶಿ ಪುಷ್ಪರಾಜ್ ಬಿಎನ್ ವಂದಿಸಿದರು. ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.