ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷ ಪ್ರೇರಿತ ಕೊಲೆಗಳಿಗೆ ದ್ವೇಷ ಭಾಷಣಕಾರರೇ ಕಾರಣ: ಎಪಿಸಿಆರ್ ಆರೋಪ
ಕೊಳತ್ತಮಜಲು ಯುವಕನ ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಮಂಗಳೂರು: ಬಂಟ್ವಾಳದಲ್ಲಿ ಇಬ್ಬರು ಯುವಕರ ಮೇಲೆ ನಡೆದ ಭೀಕರ ದಾಳಿಯಲ್ಲಿ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಕೋಮು ದ್ವೇಷದ ರಾಜಕಾರಣಕ್ಕೆ ಯುವಕರು ಬಲಿಯಾಗುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ. ಈ ದ್ವೇಷದ ಕೊಲೆಯನ್ನು ಖಂಡಿಸುತ್ತೇವೆ. ಈ ಹೇಯ ಕೃತ್ಯ ನಡೆಸಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಪಿಸಿಆರ್ - ಕರ್ನಾಟಕವು ಆಗ್ರಹಿಸಿದೆ.
ಇಲ್ಲಿ ಹೀಗೆ ಕೋಮು ದ್ವೇಷ ಪ್ರೇರಿತ ಕೊಲೆ ಹಲ್ಲೆಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ಪ್ರಮುಖ ಕಾರಣ ಯುವಕರಲ್ಲಿ ಕೋಮು ದ್ವೇಷವನ್ನು ಪ್ರೇರೇಪಿಸುತ್ತಿರುವ ದ್ವೇಷ ಭಾಷಣಕಾರರು. ತಮ್ಮ ದ್ವೇಷಭಾಷಣಗಳಿಂದ ಯುವಕರನ್ನು ತಪ್ಪುದಾರಿಗೆ ತಳ್ಳುತ್ತಿರುವ ದ್ವೇಷಭಾಷಣಕಾರರನ್ನು ಪೊಲೀಸರು ಗುರುತಿಸಿ ತಕ್ಷಣ ಬಂಧಿಸಬೇಕು. ಇಂತಹ ಕೃತ್ಯ ಪುನಾರವರ್ತಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದರೂ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಖೇದಕರ. ಈ ಹಿಂದೆ ನಡೆದ ಮಾಬ್ ಲಿಂಚಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸದೇ ಇರುವುದು ಸಹ ಈ ಕ್ರಿಮಿನಲ್ ಕೆಲಸಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಅಮಾಯಕ ಯುವಕರ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ತಪಿತ್ತಸ್ಥರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಬೇಕು ಎಂದು ಎಪಿಸಿಆರ್ ಕರ್ನಾಟಕದ ಕಾರ್ಯದರ್ಶಿ ಹುಸೈನ್ ಕೋಡಿಬೆಂಗ್ರೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆ ಕುಡುಪುವಿನಲ್ಲಿ ಮಾಡಿದಂತೆ ಬೇಜವಾಬ್ದಾರಿಯಾಗಿ ವರ್ತಿಸಿದ ಜಿಲ್ಲಾ ಪೋಲಿಸ್ ಕಮಿಷನರ್ ಅವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲರಾಗಿರುವುದರಿಂದ ಈ ಹತ್ಯೆ ನಡೆಯಲು ಕಾರಣವಾಗಿದೆ. ಆದ್ದರಿಂದ ಪೋಲಿಸ್ ಆಯುಕ್ತನ್ನು ತಕ್ಷಣ ಬದಲಿಸಿ ಬೇರೆಯವರನ್ನು ನೇಮಿಸಬೇಕು. ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಲು ವಿಶೇಷ ತಂಡ ಹಾಗೂ ತನಿಖಾದಿಕಾರಿಯನ್ನು ನೇಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ( ಎಪಿಸಿಆರ್),ಕರ್ನಾಟಕ ರಾಜ್ಯ ಘಟಕ ಆಗ್ರಹಿಸಿದೆ.