ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಅ.4ಕ್ಕೆ ಮುಂದೂಡಿಕೆ

ಮಂಗಳೂರು, ಸೆ.30: ರಾಷ್ಟ್ರೀಯ ಹಿಂದೂ ಜಾಗರಣ ಸಮಿತಿಯ ಸ್ಥಾಪಕಾಧ್ಯಕ್ಷ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರು ತಮ್ಮ ವಿರುದ್ಧ ದಾಖಲಾಗಿರುವ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲವು ಅ.4ಕ್ಕೆ ಮುಂದೂಡಿದೆ.
ಮಂಗಳವಾರ ಬೆಳಗ್ಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿ ನ್ಯಾಯಾಧೀಶರಾದ ಬಸವರಾಜ್ ವಿಚಾರಣೆ ನಡೆಸಿದರು. ಈ ವೇಳೆ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ನಿರೀಕ್ಷಣಾ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದರು.
ಅಪರಾಹ್ನ 3 ಗಂಟೆಗೆ ಮತ್ತೆ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದಾಗ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿ ವಾದ ಮಂಡಿಸಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿದರು.
ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಯಾವುದೇ ಪ್ರಾಥಮಿಕ ಸಾಕ್ಷ್ಯವಿಲ್ಲದೆ ಪ್ರಕರಣವನ್ನು ದಾಖಲಿಸಲಾಗಿದೆ.ವಶಪಡಿಸಿಕೊಂಡ ವಸ್ತುಗಳ ಸಂಪೂರ್ಣ ವಿವರಗಳನ್ನು ದೂರಿನಲ್ಲಿ ನಮೂದಿಸ ಲಾಗಿಲ್ಲ. ವಶಪಡಿಸಿಕೊಂಡ ತಲವಾರುಗಳ ಸ್ಥಿತಿ , ಬಂದೂಕಿನ ಸ್ಥಿತಿಯನ್ನು ವಿವರಿಸಲಾಗಿಲ್ಲ. ಕೆಲವು ಶಸ್ತ್ರಾಸ್ತ್ರ ಗಳನ್ನು ಕಾನೂನಿನಡಿಯಲ್ಲಿ ಅನುಮತಿ ಪಡೆಯುವುದರಿಂದ ವಿನಾಯಿತಿ ಇದೆ.ಶಸ್ತ್ರಾಸ್ತ್ರಗಳ ಸರಿಯಾದ ವಿವರಣೆಯಿಲ್ಲದೆ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ಇದಲ್ಲದೆ ಶಸ್ತ್ರಾಸ್ತ್ರಗಳು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೆ ಪ್ರಕರಣಗಳನ್ನು ದಾಖಲಿಸಲು ಕಾಯ್ದೆಯಡಿ ಸಾಧ್ಯವಿಲ್ಲ.
ಆರೋಪಿಯ ಅಪರಾಧಕ್ಕೆ ಎರಡರಿಂದ ಏಳು ವರ್ಷಗಳ ತನಕ ಶಿಕ್ಷೆ ಇರುವುದರಿಂ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ದಿನೇಶ್ ಹೆಗ್ಡೆ ಉಳೆಪಾಡಿ ವಾದಿಸಿದರು.
ಆ ಬಳಿಕ ಸರಕಾರಿ ಅಭಿಯೋಜಕರು ಸರಕಾರದ ಪರ ವಾದ ಮಂಡಿಸಲು ಕಾಲಾವಕಾಶಕ್ಕಾಗಿ ವಿಚಾರಣೆಯನ್ನು ಮುಂದೂಡಲು ಕೋರಿದರು. ಅವರ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿತು.







