Suratkal | ಕಾಟಿಪಳ್ಳ ಬದ್ರಿಯಾ ಜುಮಾ ಮಸೀದಿಯ ಮುಸ್ಲಿಂ ಜಮಾಅತ್ ಸಮಿತಿಯ ತುರ್ತು ಸಭೆ ರದ್ದು; ಹೈಕೋರ್ಟ್ ಆದೇಶ

ಸಾಂದರ್ಭಿಕ ಚಿತ್ರ
ಸುರತ್ಕಲ್: ಕಾಟಿಪಳ್ಳ ಬದ್ರಿಯಾ ಜುಮಾ ಮಸೀದಿ ಮುಸ್ಲಿಂ ಜಮಾಅತ್ ಸಮಿತಿಯು ಸತ್ತಾರ್ ಮತ್ತು ಮುಹಮ್ಮದ್ ಮುಸ್ತಫಾ ಅವರನ್ನು ಸಮಿತಿಯಿಂದ ವಜಾಗೊಳಿಸುವ ತೀರ್ಮಾನಕ್ಕೆ ಹೈಕೋರ್ಟ್ ತಡೆ ನೀಡಿದೆ.
ಧಾರ್ಮಿಕ ಮುಂದಾಳು, ಉದ್ಯಮಿ ಮುಮ್ತಾಝ್ ಅಲಿ ಅವರ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿಯು 2024ರ ಅ.11ಮತ್ತು 13ರಂದು ತುರ್ತು ಸಭೆ ನಡೆಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುಹಮ್ಮದ್ ಮುಸ್ತಫಾ, ಸದಸ್ಯರಾಗಿದ್ದ ಮುಹಮ್ಮದ್ ಸತ್ತಾರ್, ಮುಹಮ್ಮದ್ ಸಿರಾಜ್ ಅವರನ್ನು ಸಮಿತಿಯಿಂದ ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಸತ್ತಾರ್ ಮತ್ತು ಮುಸ್ತಫಾ ಅವರು ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಎರಡೂ ಕಡೆಗಳ ವಾದ ಆಲಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕ ಸದಸ್ಯ ಪೀಠವು ಮಸೀದಿಯ ಆಡಳಿತ ಸಮಿತಿಯು 2024ರ ಅ.11 ಮತ್ತು 13ರಂದು ನಡೆಸಿರುವ ಸಭೆಯು ಅಸಿಂಧು. ಅದನ್ನು ಸಮ್ಮತಿಸಲು ಸಾಧ್ಯವಿಲ್ಲ. ವಕ್ಫ್ ಇಲಾಖೆಯಷ್ಟೇ ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸಬಹುದು ಎಂದು ಸೂಚಿಸಿತು.
ಸತ್ತಾರ್ ಮತ್ತು ಮುಸ್ತಫಾ ಅವರನ್ನು ವಜಾಗೊಳಿಸುವ ಮತ್ತು ಆ ಬಳಿಕ ಸಮಿತಿ ರಚಿಸುವ ಸಂಬಂಧ ನಡೆಸಲಾಗಿರುವ ತುರ್ತು ಸಭೆ ಮತ್ತು ಅದರ ನಡಾವಳಿಗಳನ್ನೂ ರದ್ದುಗೊಳಿಸಲಾಗಿದೆ. ವಿಷಯದ ಸಂದರ್ಭಗಳಲ್ಲಿ ಸೂಕ್ತವೆಂದು ಪರಿಗಣಿಸಬಹುದಾದಂತಹ ನಡಾವಳಿಗಳು ಪ್ರಾರಂಭಿಸಲು ವಕ್ಫ್ ಮಂಡಳಿಗೆ ಮಾತ್ರ ಅವಕಾಶವಿದೆ ಎಂದು ನ್ಯಾಯಾಲವು ಹೇಳಿತು. ಅದರಂತೆ ಸಭೆ ಮತ್ತು ಸಭೆಯ ನಡಾವಳಿಗಳನ್ನೇ ರದ್ದುಗೊಳಿಸಿರುವುದರಿಂದ, ಅರ್ಜಿದಾರರು ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿ ಮುಂದುವರಿಯುತ್ತಾರೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.







