ಜ. 26ರಿಂದ ಉಳ್ಳಾಲದಲ್ಲಿ ಬೃಹತ್ ಕಮ್ಯುನಿಟಿ ಫೆಸ್ಟ್; ಕ್ರೀಡಾ ಕೂಟ, ಉದ್ಯೋಗ ಮೇಳ, ರಕ್ತದಾನ ಶಿಬಿರ

ಮಂಗಳೂರು, ಜ.24: ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್(ಯುಇಎ) ವತಿಯಿಂದ ಉಳ್ಳಾಲದಲ್ಲಿ ಏಳು ದಿನಗಳ ಕಾಲ ಬೃಹತ್ ಕಮ್ಯುನಿಟಿ ಫೆಸ್ಟ್ -ಕ್ರೀಡಾ ಕೂಟ, ಉದ್ಯೋಗ ಮೇಳ, ರಕ್ತದಾನ ಶಿಬಿರ ಮತ್ತು ಆಹಾರ ಮೇಳ ನಡೆಯಲಿದೆ ಎಂದು ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಶನ್(ಯುಇಎ) ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಸಿರಾಜುದ್ದೀನ್ ಎರ್ಮಾಳ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದಲ್ಲಿ 7 ದಿನಗಳ ಕಾಲ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ, ಉಡುಪಿ, ಹಾಗೂ ಕಾಸರಗೋಡು ಜಿಲ್ಲೆಗಳ ಪ್ರತಿಭಾನ್ವಿತ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ಬಲಿಷ್ಠ ಆಟಗಾರರನ್ನೊಳಗೊಂಡ ವಿವಿಧ ತಂಡಗಳು ಲೀಗ್ ಮಾದರಿಯ ಪಂದ್ಯಾ ಕೂಟದಲ್ಲಿ ಪೈಪೋಟಿ ನಡೆಸಲಿದೆ. ಕಬಡ್ಡಿ, ವಾಲಿಬಾಲ್ ಮತ್ತು ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಇರುತ್ತದೆ. ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮುಂದಿನ ದಿನಗಳಲ್ಲಿ ಉತ್ತಮ ತರಬೇತಿಗಾಗಿ ಯುಇಎ ಸಂಸ್ಥೆಯು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ವಿವರಿಸಿದರು.
ಜ.26ರಂದು ಸಂಜೆ 4 ಗಂಟೆಗೆ ಉಳ್ಳಾಲದಲ್ಲಿ ಎಲ್ಲ ಕ್ರೀಡಾಪಟುಗಳ ಪಥ ಸಂಚಲನ ಹಾಗೂ ಮೆರವಣಿಗೆಯೊಂದಿಗೆ ಆರಂಭಗೊಂಡು ಉಳ್ಳಾಲದ ಸೀ ಗ್ರೌಂಡ್‌ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ವಿವಿಧ ರಾಜಕೀಯ, ಸಾಮಾಜಿಕ ಕ್ಷೇತ್ರದ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿ ದ್ದಾರೆ. ಸ್ಪೀಕರ್ ಇಲೆವನ್ಸ್ ಹಾಗೂ ಕಮಿಷನರ್ ಇಲೆವೆನ್ಸ್ ತಂಡಗಳ ವಿರುದ್ಧ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ರಾಷ್ಟ್ರ ಮಟ್ಟದ ಆಟಗಾರರೇ ಪ್ರಮುಖ ಆಕರ್ಷಣೆ:ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಲವಾರು ಕ್ರೀಡಾಪಟುಗಳು ಭಾಗವಹಿಸಲಿದ್ದು, ಟೆನ್ನಿಸ್ ಕ್ರಿಕೆಟ್‌ನಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಅಭಿಮಾನಿ ಗಳನ್ನು ಹೊಂದಿರುವ ಉಸ್ಮಾನ್ ಪಟೇಲ್, ಸಲೀಂ ಮೈಟಿ ಸೇರಿದಂತೆ ವಿವಿಧ ಆಟಗಾರರು ವುಮುಖ ಆಕರ್ಷಣೆಯಾಗಲಿದ್ದಾರೆ. ಸೀ ಗ್ರೌಂಡ್‌ನಲ್ಲಿ ವಿಭಿನ್ನ ರೀತಿಯ ಏರ್ ಶೋ ಆಯೋಜನೆ ಮಾಡಲಾಗುವುದು. ಇದು ಪ್ರಮುಖ ಆಕರ್ಷಣೆಯಾಗಲಿದೆ ಎಂದು ಸಿರಾಜ್ ಎಂದು ಮುಹಮ್ಮದ್ ಸಿರಾಜುದ್ದೀನ್ ಮಾಹಿತಿ ನೀಡಿದರು.
ಯುನೈಟೆಡ್ ಎಂಪವರ್‌ಮೆಂಟ್ ಅಸೋಸಿಯೇಷನ್ ರಾಜ್ಯಮಟ್ಟದ ಕ್ರೀಡಾ ಪ್ರತಿಭೆಗಳಿಗೆ ತರಬೇತಿ, ಅವರಿಗೆ ರಾಷ್ಟ್ರ ಮಟ್ಟದಲ್ಲಿ ಒದಗಿಸಲು ಶ್ರಮಿಸುವುದು, ಕ್ರೀಡೆಯನ್ನು ವೃತ್ತಿಯಾಗಿ ಪರಿಗಣಿಸಲು ಉತ್ತೇಜಿಸುವುದು, ಸಮುದಾಯದಲ್ಲಿ ಕ್ರೀಡಾಪರ ಒಲವು ಮೂಡಿಸುವುದು, ಕ್ರೀಡೆಯಲ್ಲಿ ಸಮುದಾಯದ ಸಬಲೀಕರಣ ಮತ್ತಿತರ ಉದ್ದೇಶಗಳನ್ನು ಹೊಂದಿದೆ ಎಂದರು.
ಭಾರತೀಯ ಸೊಸೈಟಿ ಕಾಯ್ದೆಯಡಿ ನೋಂದಾಯಿತವಾದ ಈ ಸಂಸ್ಥೆ ಕರ್ನಾಟಕದಲ್ಲಿ ಕ್ರೀಡೆ ಮತ್ತು ಕ್ರೀಡಾಪಟು ಗಳನ್ನು ಬೆಳೆಸಲು ಶ್ರಮಿಸುತ್ತಿರುವುದಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ಪ್ರಮುಖ ಧ್ವನಿಯಾಗಿ ಹೊರಹೊಮ್ಮಲು ಸಂಸ್ಥೆಯು ಕಾರ್ಯಾಚರಿಸುತ್ತಿದೆ. ಕ್ರೀಡಾಪಟುಗಳ ಜೀವನದಲ್ಲಿ ಕಾರ್ಯಬದ್ಧ ಒಕ್ಕೂಟವನ್ನು ನಿರ್ಮಿಸಿ ಬೆಳಸಿ, ಮುನ್ನಡೆಸುವ ಗುರಿ ಇಟ್ಟುಕೊಂಡಿರುವ ಯುಇಎ ಸಂಸ್ಥೆಯು ಕ್ರಿಕೆಟ್, ಫುಟ್ಬಾಲ್ , ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್, ಚೆಸ್, ಕ್ಯಾರಂ, ಟೇಬಲ್ ಟೆನ್ನಿಸ್, ಖೋ-ಖೋ, ತೋ ಬಾಲ್, ಕುಸ್ತಿ, ಕರಾಟೆ, ಜುಡೋ, ಓಟ, ಜಂಪಿಂಗ್, ತ್ರೋ ಹಾಗೂ ಸ್ಟೇಟಿಂಗ್ ಮುಂತಾದ ವಿವಿಧ ಕ್ರೀಡಾಪಟುಗಳ ಪುರೋಗತಿಗಾಗಿ ಶ್ರಮಿಸುತ್ತಿದೆ ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹಜ್ಜಾಜ್, ಕೋಶಾಧಿಕಾರಿ ಸಿರಾಜ್ ಪುತ್ತೂರು, ಸಂಸ್ಥೆಯ ಪ್ರಮುಖರಾದ ಶರೀಫ್ ಸಾಲ್ಮರ, ಶರೀಫ್ ವಳಾಲು , ಗಫೂರ್ ಫರಂಗಿಪೇಟೆ, ಸಿದ್ದೀಕ್ ಉಳ್ಳಾಲ, ತಾಜುದ್ದೀನ್ ಸುಳ್ಯ, ರಮೀಜ್ ಪಡುಬಿದ್ರೆ, ಇರ್ಫಾನ್ ಮೂಡಬಿದ್ರೆ, ರಿಯಾಝ್ ಉಳ್ಳಾಲ,ಶಫೀಕ್ ವಳಾಲು ಉಪಸ್ಥಿತರಿದ್ದರು.







