ಪತಿಯನ್ನು ಕೊಂದ ಪ್ರಕರಣ| ಭ್ರಮಾಧೀನ ಕಾಯಿಲೆಯಿಂದ ಬಳಲುತ್ತಿದ್ದ ಆರೋಪಿಗೆ ಜೈಲುವಾಸದ ಬದಲು ನಿಮ್ಹಾನ್ಸ್‌ಗೆ ಸೇರಿಸಲು ಆದೇಶ

ಮಂಗಳೂರು: ತನ್ನ ಪತಿಯನ್ನೇ ಪತ್ನಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಎಫ್.ಟಿ.ಎಸ್.ಸಿ-1-ಪೊಕ್ಸೊ) ನ್ಯಾಯಾಧೀಶ ಮೋಹನ ಜೆ.ಎಸ್. ಆರೋಪಿ ಎಲಿಯಮ್ಮಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲು ಆದೇಶಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ 2022ರ ಜುಲೈ 5ರಂದು ಮುಂಜಾವ 5:30ಕ್ಕೆ ಯೋಹಾನನ್ ಎಂಬವರನ್ನು ಅವರ ಪತ್ನಿ ಎಲಿಯಮ್ಮ ಕತ್ತಿಯಿಂದ ಕಡಿದು ಕೊಲೆ ಮಾಡಿದ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ತನಿಖೆ ನಡೆಸಿದಾಗ ಆರೋಪಿ ಎಲಿಯಮ್ಮ ತಾನು ಕೊಂದಿರುವುದು ಹೌದೆಂದು ಒಪ್ಪಿಕೊಂಡಿದ್ದರು.
ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ನ್ಯಾಯಾಲಯ ಸಾಕ್ಷಿ ವಿಚಾರಣೆಯನ್ನು ಮುಂದುವರೆಸಿತ್ತು. ಸಾಕ್ಷಿದಾರರು ಆಕೆಯ ವಿರುದ್ಧ ಸಾಕ್ಷಿ ನುಡಿದಿದ್ದರು. ಆರೋಪಿ ಪರ ವಕೀಲರಾದ ವಿಕ್ರಮ್‌ರಾಜ್ ಎ. ಮತ್ತು ಜೀವನ್ ಎ.ಎಂ. ಆರೋಪಿಯ ವೈದ್ಯಕೀಯ ಹಿನ್ನೆಲೆಯನ್ನು ನ್ಯಾಯಾಲಯದ ಗಮನ ಸೆಳೆದರು. ಅಂದರೆ ಎಲಿಯಮ್ಮ ದೀರ್ಘಕಾಲ ದಿಂದ ಮಾನಸಿಕ ಅಸ್ವಸ್ಥತೆ ಮತ್ತು ಭ್ರಮೆಗಳಿಂದ (Delusional Disorder) ಬಳಲುತ್ತಿದ್ದರು. ಹಾಗಾಗಿ ತಾನು ಮಾಡುತ್ತಿರುವ ಕೃತ್ಯವು ತಪ್ಪು ಅಥವಾ ಕಾನೂನು ಬಾಹಿರ ಎಂದು ತಿಳಿಯುವ ಸ್ಥಿತಿಯಲ್ಲಿ ಆರೋಪಿ ಇರಲಿಲ್ಲ. ಆದ್ದರಿಂದ ಆಕೆ ಅಪರಾಧ ಎಸಗಿಲ್ಲ ಎಂದು ವಕೀಲರು ವಾದ ಮಂಡಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಆರೋಪಿ ಎಲಿಯಮ್ಮ ತನ್ನ ಪತಿಯನ್ನು ಕೊಲೆ ಮಾಡಿದ್ದು ಸಾಬೀತಾಗಿದೆ. ಆದರೆ ಆಕೆ ಭ್ರಮಾಧೀನ ಕಾಯಿಲೆ (Delusional Disorder)ಯಿಂದ ಬಳಲುತ್ತಿದ್ದ ಕಾರಣ ಆಕೆಯನ್ನು ಆರೋಪದಿಂದ ಮುಕ್ತಗೊಳಿಸಿದ್ದಾರೆ. ಅಂದರೆ ಆಕೆಯನ್ನು ನಿಮ್ಹಾನ್ಸ್‌ಗೆ ಸೇರಿಸಿ ಆಕೆ ಬಿಡುಗಡೆಗೆ ಯೋಗ್ಯಳೇ ಮತ್ತು ಆಕೆಯಿಂದ ಸಮಾಜಕ್ಕೆ ಅಥವಾ ಆಕೆಗೆ ಅಪಾಯವಿದೆಯೇ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಜೈಲು ಅಧೀಕ್ಷಕರಿಗೆ ಆದೇಶಿಸಿದ್ದಾರೆ.







