ಹೆಣ್ಣು ವಿದ್ಯಾವಂತೆಯಾದರೆ ಸಮಾಜದಲ್ಲಿ ಬದಲಾವಣೆ: ಮುಲ್ಲೈ ಮುಗಿಲನ್
ಮಂಗೂರು: ಜೆಂಡರ್ ಚಾಂಪಿಯನ್ ಮಕ್ಕಳ ಸಮಾವೇಶ

ಮಂಗಳೂರು, ಫೆ.1: ಹೆಣ್ಣು ಮತ್ತು ಗಂಡಿಗೆ ತಾರಮತ್ಯವಿಲ್ಲದೆ ಶಿಕ್ಷಣ ಒದಗಿಸುವುದು ಅತೀ ಅಗತ್ಯ. ಅದರಲ್ಲೂ ಹೆಣ್ಣು ಕಲಿತರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭಿಪ್ರಾಯಿಸಿದ್ದಾರೆ.
ನಗರದ ಮಿನಿ ಪುರಭವನದಲ್ಲಿ ಶನಿವಾರ ಡೀಡ್ಸ್, ದ.ಕ. ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾದ ಕನ್ವೆನ್ಶನ್ ಆಫ್ ಜೆಂಡರ್ ಚಾಂಪಿಯನ್ಸ್ (ಲಿಂಗತ್ವ ಹರಿಕಾರರ ಸಮಾವೇಶ) ಎಂಬ ಮಕ್ಕಳ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಲಿಂಗ ಭೇದರಹಿತ ಸಮಾಜ ನಿರ್ಮಾಣದ ಜತೆಗೆ ನಮ್ಮಲ್ಲಿ ನಮಗೆ ಆತ್ಮವಿಶ್ವಾಸ ಮುಖ್ಯವಾಗಿದೆ. ಡೀಡ್ಸ್ ಸಂಸ್ಥೆಯು ಶಾಲಾ ಮಕ್ಕಳಿಗೆ ನೀಡುತ್ತಿರುವ ತರಬೇತಿಯ ಪ್ರಯೋಜನವು ವೇದಿಕೆಯಲ್ಲಿ ಮಕ್ಕಳ ಧೈರ್ಯ ಹಾಗೂ ಸ್ಪಷ್ಟತೆಯ ಮಾತುಗಳಿಂದ ವ್ಯಕ್ತವಾಗಿದೆ. ಈ ಪ್ರಯತ್ನ ಮುಂದುವರಿಯಲಿ ಎಂದು ಹೇಳಿದರು.
ಡೀಡ್ಸ್ ಸಂಸ್ಥೆಯಿಂದ ಶಾಲೆಯಲ್ಲಿ ನೀಡಲಾದ ತರಬೇತಿಯಿಂದಾದ ಪ್ರಯೋಜನದ ಬಗ್ಗೆ ಅನಿಸಿಕೆ ಹಂಚಿಕೊಂಡ ಮುಲ್ಲಕಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ, ‘ಮೊದಲೆಲ್ಲಾ ಮನೆ ಕೆಲಸ ನಾನೊಬ್ಬಳೇ ಮಾಡಬೇಕಾಗಿತ್ತು. ತಮ್ಮ ಆಟವಾಡಿಕೊಂಡಿರುತ್ತಿದ್ದ. ಆದರೆ ಡೀಡ್ಸ್ ಸಂಸ್ಥೆಯವರು ಶಾಲೆಗೆ ಬಂದು ಲಿಂಗ ತಾರತಮ್ಯದ ಬಗ್ಗೆ ತಿಳಿ ಹೇಳಿದ್ದನ್ನು ಮನೆಯಲ್ಲಿ ತಿಳಿಸಿದೆ. ಈಗ ನನ್ನ ತಮ್ಮನೂ ಮನೆಯಲ್ಲಿ ಗುಡಿಸುವ, ಒರೆಸುವ ಕೆಲಸ ಮಾಡುತ್ತಾನೆ. ಮನೆಯಲ್ಲಿ ಏನೂ ಕೆಲಸ ಮಾಡದಿದ್ದ ಅಪ್ಪನೂ ಅಮ್ಮನಿಗೆ ಇದೀಗ ಮನೆ ಕೆಲಸದಲ್ಲಿ ನೆರವಾಗುತ್ತಾರೆ. ನಾನು ಮುಂದೆ ನ್ಯಾಯಾಧೀಶೆಯಾಗಿ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಬಯಕೆ ಹೊಂದಿದ್ದೇನೆ’ಎಂದು ಅನಿಸಿಕೆ ಹಂಚಿಕೊಂಡರು.
ಕಾರ್ನಾಡು ಮುಲ್ಕಿ ಸದಾಶಿವ ನಗರದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರುತಿ ಅನುಭವ ಹಂಚಿಕೊಳ್ಳುತ್ತಾ, ‘ಡೀಡ್ಸ್ ಸಂಸ್ಥೆಯಿಂದ ನಮ್ಮ ಶಾಲೆಯಲ್ಲಿ ನೀಡಲಾದ ತರಬೇತಿಯ ವೇಳೆ ಗೃಹ ದೌರ್ಜನ್ಯದ ವಿರುದ್ಧದ ಕಾನೂನಿನ ಅರಿವು ನನಗೆ ತುಂಬಾ ಆಪ್ತವಾಯಿತು. ನನ್ನ ಅಕ್ಕನ ಗಂಡನ ಮನೆಯಲ್ಲಿ ಆಕೆಗೆ ಹಿಂಸೆ ನೀಡಲಾಗುತ್ತಿತ್ತು. ಯಾರ ಜೊತೆಯಲ್ಲೂ ಮಾತನಾಡುವಂತಿರಲಿಲ್ಲ. ನಾನು ಮನೆಯಲ್ಲಿ ಹಿಂಸೆಯ ವಿರುದ್ಧದ ಕಾನೂನಿನ ಬಗ್ಗೆ ತಿಳಿ ಹೇಳಿದೆ. ಈಗ ಅವರ ಮನೆಯವರು ಬದಲಾಗಿದ್ದಾರೆ. ಆಕೆಯನ್ನು ಪ್ರೀತಿಯಿಂದ ನೋಡುತ್ತಾರೆ ಎಂದು ತರಬೇತಿಯಿಂದ ತಮಗಾದ ಪ್ರಯೋಜನ ಹೇಳಿಕೊಂಡರು.
ಬೈಕಂಪಾಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಗೀತಾ ಅಭಿಪ್ರಾಯ ಹಂಚಿಕೊಳ್ಳುತ್ತಾ, ನಾನು ಓದಿ ವಕೀಲೆಯಾಗಬೇಕೆಂದುಕೊಂಡಿದ್ದೆ. ತರಬೇತಿಯ ಸಂದರ್ಭ ನಮಗೆ ಜಿಲ್ಲಾ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ವಕೀಲರು ನ್ಯಾಯಕ್ಕಾಗಿ ಮಂಡಿಸುವ ವಾದವನ್ನು ನೋಡುವ ಅವಕಾಶ ದೊರಕಿತು’ ಎಂದು ಹೇಳಿದರು.
ಕುಪ್ಪೆಪದವು ಕಿಲಿಂಜಾರು ಅರಮನೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್, ಗಂಗಾಧರ್, ಕುರ್ನಾಡು ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಮೊದಲಾದವರು ತರಬೇತಿಯಲ್ಲಿ ಪಡೆದ ಅನುಭವಗಳನ್ನು ಹಂಚಿಕೊಂಡರು.
ಮಂಜನಾಡಿ ಕಲ್ಕಟ್ಟ ಸರಕಾರಿ ಶಾಲೆಯ ನಮಿತಾ ರಾಣಿ ಮಾತನಾಡಿ, ಮಕ್ಕಳು ತರಬೇತಿಗಾಗಿ ಡೀಡ್ಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಶನಿವಾರ ಬರುವುದನ್ನು ಕಾದು ಕುಳಿತಿರುತ್ತಿದ್ದರು. ಸುಮಾರು ಎಂಟು ತಿಂಗಳ ಕಾಲ ಮಕ್ಕಳು ಸಂಸ್ಥೆಯ ವತಿಯಿಂದ ಜೀವನಾನುಭವ ಪಡೆದುಕೊಂಡರೆ, 1997ರಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ತಾನು ಮೊದಲ ಬಾರಿ ಪೊಲೀಸ್ ಠಾಣೆಯ ಕಾರ್ಯವೈಖರಿಯನ್ನೂ ನೋಡಲು ಅವಕಾಶ ದೊರೆಯಿತು ಎಂದರು.
ಕುರ್ನಾಡು ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಂಧ್ಯಾ ಹೆಗಡೆ, ಡೀಡ್ಸ್ ಸಂಸ್ಥೆಯಿಂದ ವಿವಿಧ ಶಾಲೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಣಿ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ., ಹಿರಿಯ ರಂಗಕರ್ಮಿ ಮೋಹನ್ ಚಂದ್ರ, ಪಡಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಉಪಸ್ಥಿತರಿದ್ದರು. ಡೀಡ್ಸ್ ಸಂಸ್ಥೆಯ ದಾಕ್ಷಾಯಿಣಿ ಸ್ವಾಗತಿಸಿದರು.
ತರಬೇತಿಯಲ್ಲಿ ಭಾಗವಹಿಸಿದ್ದ ಶಾಲೆಗಳು ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಿಂದ ಕಳೆದ 8 ತಿಂಗಳಲ್ಲಿ 15 ಮಂದಿ ಸಂಪನ್ಮೂಲ ವ್ಯಕ್ತಿಗಳ ಮೂಲಕ 14 ಶಾಲೆಗಳಲ್ಲಿ ಮಕ್ಕಳಿಗೆ ನಾಯಕತ್ವದ ಬಗ್ಗೆ ಮಾಹಿತಿ ಹಾಗೂ ಲಿಂಗ ತಾರತಮ್ಯ, ಗೃಹ ದೌರ್ಜನ್ಯದ ವಿರುದ್ಧ ಅರಿವು ಮೂಡಿಸಲಾಗಿದೆ. ಜತೆಗೆ ಮಕ್ಕಳಿಗೆ ಚೈಲ್ಡ್ ಲೈನ್, ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಠಾಣೆ, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಗಳಿಗೆ ಕರೆದೊಯ್ದು, ಅಲ್ಲಿನ ಕಾರ್ಯನಿರ್ವಹಣೆಯ ಬಗ್ಗೆ ಅರಿವು ಮೂಡಿಸಲಾಗಿದೆ. ಮುಂದೆ ಸೈಬರ್ ಸುರಕ್ಷತೆಯ ಬಗ್ಗೆಯೂ ತರಬೇತಿ ನೀಡಲು ಚಿಂತಿಸಲಾಗಿದೆ. ತರಬೇತಿ ಸಂದರ್ಭ ಶಾಲೆಗಳಲ್ಲಿ ಕೆಲವು ಮಕ್ಕಳಿಗೆ ಕೌನ್ಸೆಲಿಂಗ್ (ಆಪ್ತ ಸಮಾಲೋಚನೆ) ಅಗತ್ಯವಿರುವುದು ಕಂಡು ಬಂದಿದೆ. ಆ ಮಕ್ಕಳ ಮಾತನ್ನು ಕೇಳುವ, ಅವರನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಲ್ಲೂ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಒದಗಿಸುವ ಅಗತ್ಯವಿದೆ ಎಂದು ಹೇಳಿದರು.
ತಾಯಿಯ ಸಾಹಸಗಾಥೆ ತೆರೆದಿಟ್ಟ ಡಿಸಿ ಮುಲ್ಲೈ ಮುಗಿಲನ್
‘ನನ್ನ ಅಮ್ಮನಿಗೆ ನಾಲ್ಕು ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರ. ತಮಿಳುನಾಡಿನಲ್ಲಿ ಅಮ್ಮನವರು ವಾಸವಿದ್ದ ಗ್ರಾಮದಲ್ಲಿ ಆ ಅವಧಿಯಲ್ಲಿ ಬಸ್ ಸೌಲಭ್ಯವೇ ಇಲ್ಲವಾಗಿತ್ತು. ನಮ್ಮಲ್ಲಿ ಹಿಂದೆ ಕುಟುಂಬವೊಂದರಲ್ಲಿ ಹೆಚ್ಚು ಹೆಣ್ಣು ಮಕ್ಕಳಿದ್ದು, ಇನ್ನು ಹೆಣ್ಣು ಮಕ್ಕಳು ಬೇಡ ಎಂದಾಗ ಕೊನೆಯ ಹೆಣ್ಣು ಮಗುವಿಗೆ ‘ಪೋದು ಪೊಣ್ಣು ’ (ಸಾಕು ಹೆಣ್ಣು) ಎಂಬ ಉಪ ಹೆಸರನ್ನು ಇಡುವ ಪದ್ಧತಿಯಿತ್ತು. ನನ್ನ ನಾಲ್ಕನೆಯ ಚಿಕ್ಕಮ್ಮನ ಹೆಸರು ಕಲಾದೇವಿ ಆಗಿದ್ದರೂ, ಆಕೆಗೆ ಈ ಉಪನಾಮವನ್ನೂ ಇಡಲಾಗಿತ್ತು. ಆ ಬಡತನದ ಸಮಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹಿಂದೇಟು ಮಾತ್ರವಲ್ಲ, ಶಾಲೆಯ ಶುಲ್ಕ ತೆರಲೂ ಸಾಧ್ಯವಾಗದ ಪರಿಸ್ಥಿತಿ. ಆದರೆ ನನ್ನ ಅಮ್ಮ ಮಾತ್ರ ಹಠ ಹಿಡಿದು ಓದುತ್ತೇನೆಂದು ಮೂರು ಮೈಲು ನಡೆದು ಶಾಲೆಗೆ ಹೋಗುತ್ತಿದ್ದರಂತೆ. ಆ ಸಂದರ್ಭ ಹೆಣ್ಣು ಮಕ್ಕಳು ಈ ರೀತಿ ಹೋಗುವುದಕ್ಕೂ ಆಕ್ಷೇಪವಿತ್ತು. ಆದರೆ ಅದ್ಯಾವುದಕ್ಕೂ ಹಿಂಜರಿಯದೆ ಧೈರ್ಯದಿಂದ ತೋಟದಲ್ಲಿ ಸಿಗುವ ಹುಳಿಯನ್ನು ಹೆಕ್ಕಿ ಅದರಿಂದ ಸಿಕ್ಕ ಹಣದಲ್ಲಿ ಬುಟ್ಟಿ ಮಾಡಿ ಮಾರಾಟ ಮಾಡಿ ತನ್ನ ಶಾಲೆಯ ಖರ್ಚನ್ನು ತಾನೇ ಭರಿಸಿ ಓದಿ ಊರಿನ ಮೊದಲ ಪದವೀಧರೆ ಅನ್ನಿಸಿಕೊಂಡರು. ಆ ರೀತಿಯಾಗಿ ಓದಿ, ಸರಕಾರಿ ಉದ್ಯೋಗ ಪಡೆದ ಕಾರಣ ನಾನು ಇಂದು ಈ ಸ್ಥಾನಕ್ಕೇರಲು ಕಾರಣವಾಯಿತು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶಾಲಾ ಮಕ್ಕಳಿಗೆ ತಮ್ಮ ತಾಯಿಯ ಸಾಹಸಗಾಥೆಯನ್ನು ವಿವರಿಸಿದರು.







