ಐಎಂಎ ಮಂಗಳೂರು: ನೂತನ ಅಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಆಯ್ಕೆ

ಮಂಗಳೂರು ಅ.8: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳೂರು ಶಾಖೆಯ 2025-26 ಸಾಲಿನ ನೂತನ ಅಧ್ಯಕ್ಷರಾಗಿ ನಗರದ ಖ್ಯಾತ ಮೂತ್ರರೋಗ ಶಾಸ್ತ್ರ ತಜ್ಞ ಹಾಗೂ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಮೂತ್ರರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಕಾರ್ಯದರ್ಶಿಯಾಗಿ ಡಾ. ಪ್ರಕಾಶ್ ಹರಿಶ್‌ಚಂದ್ರ, ಕೋಶಾಧಿಕಾರಿಯಾಗಿ ಡಾ. ಜೂಲಿಯನ್ ಸಲ್ಡಾನ್ಹ , ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಡಾ. ಪ್ರೇಮ ಡಿ ಕುನ್ಹ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅ. 17ರಂದು ನಗರದ ಐಎಂಎ ಸಭಾಂಗಣದಲ್ಲಿ ನಡೆಯಲಿದ್ದು, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಮಾಜಿ ಅಧ್ಯಕ್ಷ ಡಾ. ವೆಂಕಟ್ರಾಯ ಪ್ರಭು ಪದಗ್ರಹಣ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳ ಪದಗ್ರಹಣ ವಿಧಿವಿಧಾನವನ್ನು ನೆರವೇರಿಸಲಿರುವರು.
ಬೆಂಗಳೂರು ಗ್ರಾಮಾಂತರ ಪ್ರದೇಶ ಕ್ಷೇತ್ರದ ಸಂಸದ ಹಾಗೂ ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಹಾಗೂ ವೆನ್‌ಲಾಕ್ ಆಸ್ಪತ್ರೆಯ ಆಧೀಕ್ಷಕ ಡಾ. ಶಿವಪ್ರಕಾಶ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ನಿರ್ಗಮನ ಅಧ್ಯಕ್ಷೆ ಡಾ. ಜೆಸ್ಸಿ ಮರಿಯಾ ಡಿ ಸೋಜ ಅವರು ನೂತನ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿರುವರು.
ಡಾ. ಸದಾನಂದ ಪೂಜಾರಿ ರಾಜ್ಯಮಟ್ಟದ ಡಾ. ಬಿ.ಸಿ. ರೋಯ್ ಪ್ರಶಸ್ತಿ ಹಾಗೂ ಸುವರ್ಣ ದೃಶ್ಯ ಮಾಧ್ಯಮ ವಾಹಿನಿಯು ಪ್ರಸ್ತುತ ಪಡಿಸುವ ಹೆಲ್ತ್ ಕೇರ್ ಎಕ್ಸೆಲೆನ್ಸ್ ಪ್ರಶಸ್ತಿ ಪಡೆದಿದ್ದಾರೆ.







