ಆ.3ರಂದು ಎಂ.ಫ್ರೆಂಡ್ಸ್ 'ಮೀಲ್ಸ್ ಆನ್ ವ್ಹೀಲ್ಸ್', ಕಾರುಣ್ಯ ಕಿಚನ್ ಉದ್ಘಾಟನೆ

ಮಂಗಳೂರು, ಆ.2: ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿನ ಕಾರುಣ್ಯ ಯೋಜನೆಗೆ ಲಯನ್ಸ್ ಜಿಲ್ಲೆ 317 ಡಿ ವತಿಯಿಂದ ಎಲ್.ಸಿ.ಐ.ಎಫ್. (ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಶನಲ್ ಫೌಂಡೇಶನ್) ಅನುದಾನದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 'ಮೀಲ್ಸ್ ಆನ್ ವ್ಹೀಲ್ಸ್' ಫುಡ್ ಟ್ರಕ್ ಮತ್ತು ಸುಸಜ್ಜಿತ ಕಾರುಣ್ಯ ಅಡುಗೆ ಮನೆ ಉದ್ಘಾಟನೆ ಕಾರ್ಯಕ್ರಮ ಆ.3ರಂದು ಬೆಳಗ್ಗೆ 10:30ಕ್ಕೆ ಮಂಗಳೂರಿನ ವೆಲೆನ್ಸಿಯಾದ ಮರಿಯ ಜಯಂತಿ ಚರ್ಚ್ ಹಾಲ್ ನಲ್ಲಿ ಜರುಗಲಿದೆ.
ಎಂ.ಫ್ರೆಂಡ್ಸ್ ಟ್ರಸ್ಟ್ ಕಳೆದ ಏಳು ವರ್ಷಗಳಿಂದ ಪ್ರತಿದಿನ ಮಂಗಳೂರಿನ ವೆನ್ಲಾಕ್ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಹವರ್ತಿಗಳಿಗೆ ರಾತ್ರಿಯ ಊಟ ನೀಡುತ್ತಿದೆ. ಈ ಯೋಜನೆಗೆ ಹಿಂದಿನ ಲಯನ್ಸ್ ಜಿಲ್ಲಾ ಗವರ್ನರ್ ಆಗಿದ್ದ ವಸಂತ ಕುಮಾರ್ ಶೆಟ್ಟಿ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ಸ್ ಫೌಂಡೇಶನ್ ಮೂಲಕ ಫುಡ್ ಟ್ರಕ್ ಹಾಗೂ ಅಡುಗೆ ಮನೆಯಲ್ಲಿ ಉಪಯೋಗಿಸುವ ಸ್ವಯಂಚಾಲಿತ ಚಪಾತಿ ಯಂತ್ರ, ಇಡ್ಲಿ ತಯಾರಿ ಯಂತ್ರ, ಗ್ಯಾಸ್ ತವಾ ಸ್ಟವ್, ಗ್ರೈಂಡರ್, ಜನರೇಟರ್ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಈ ಎಲ್ಲಾ ಸಾಮಾಗ್ರಿಗಳ ವ್ಯವಸ್ಥೆ ಮಾಡಲಾಗಿದೆ.
ಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಶನಲ್ ಫೌಂಡೇಶನ್ ಮಾಜಿ ಟ್ರಸ್ಟಿ ಹಾಗೂ ಖ್ಯಾತ ಮಹಿಳಾ ಉದ್ಯಮಿ ಅರುಣಾ ಓಸ್ವಾಲ್ ಯೋಜನೆಯನ್ನು ವೆಲೆನ್ಸಿಯಾ ಕಾರುಣ್ಯ ಅಡುಗೆ ಮನೆಯಲ್ಲಿ ಉದ್ಘಾಟಿಸುವರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಜೆಸಿಂತಾ ಡಿಸೋಜ, ಎಲ್.ಸಿ.ಐ.ಎಫ್. ವಲಯ ನಾಯಕ ವಂಶಿಧರ್ ಬಾಬು, ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ, ಮಾಜಿ ಗವರ್ನರ್ ವಸಂತ ಕುಮಾರ್ ಶೆಟ್ಟಿ, ಎಲ್.ಸಿ.ಐ.ಎಫ್. ಕೋ ಆರ್ಡಿನೇಟರ್ ಸಂಜೀತ್ ಶೆಟ್ಟಿ, ಬಿ.ಎಂ.ಶರೀಫ್ ವೈಟ್ ಸ್ಟೋನ್, ರಹೀಮ್ ಕರ್ನಿರೆ ಎಕ್ಸ್ ಪರ್ಟೈಸ್, ರೋಹನ್ ಮೊಂತೇರೋ ಮಂಗಳೂರು, ರೊನಾಲ್ಡ್ ಮಾರ್ಟಿಸ್ ದುಬೈ, ತುಫೈಲ್ ಅಹ್ಮದ್ ಮಂಗಳೂರು, ಮುಸ್ತಫ ಭಾರತ್ ಮಂಗಳೂರು, ಮೋಹನ್ ಬೆಂಗ್ರೆ ಭಾಗವಹಿಸುವರು. ಎಂ.ಫ್ರೆಂಡ್ಸ್ ಕಾರ್ಯಾಧ್ಯಕ್ಷ ಸುಜಾಹ್ ಮುಹಮ್ಮದ್ ಅಧ್ಯಕ್ಷತೆ ವಹಿಸುವರು ಎಂದು ಎಂ.ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಹಾಗೂ ಕಾರುಣ್ಯ ಯೋಜನೆಯ ಮುಖ್ಯಸ್ಥ ಹನೀಫ್ ಹಾಜಿ ಗೋಳ್ತಮಜಲು ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







