ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಸಾಟ್ ಕಟ್ಟಡದ ಲೋಕಾರ್ಪಣೆ

ಸುಳ್ಯ : ಶಿಕ್ಷಣಕ್ಕಾಗಿ ಸರಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಸಂಘ-ಸಂಸ್ಥೆಗಳು ಕೂಡ ಶಿಕ್ಷಣಕ್ಕೆ ಆದ್ಯತೆಯನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಇಂತಹ ಅತ್ಯುತ್ತಮವಾದ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಸಮಾಜ ಕಟ್ಟುವ ನಾಯಕರಾಗಿ ಮುನ್ನಡೆಯಿರಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಒಸಾಟ್ ಸಂಸ್ಥೆಯ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಕರ ಒಳ್ಳೆಯ ವಿಚಾರಗಳನ್ನು ಪಡೆದು ಜ್ನಾನವಂತರಾಗಿ ಇತರರಿಗೆ ಮಾರ್ಗದರ್ಶಕರಾಗಬೇಕು. ಈ ಮೂಲಕ ಸರಕಾರ, ಸಂಘ-ಸಂಸ್ಥೆಗಳು ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗೆ ಪ್ರತಿಫಲ ನೀಡಬೇಕಿದೆ ಎಂದ ಅವರು, ಈಗಾಗಲೇ ಒಸಾಟ್ ಸಂಸ್ಥೆಯಿಂದ ಸುಳ್ಯದಲ್ಲಿ ಎರಡು ಕಡೆ ಕಟ್ಟಡಗಳು ನಿರ್ಮಾಣಗೊಂಡಿದೆ. ಮುಂದೆ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಕಟ್ಟಡ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಮಂಜುಳಾ ಬಡಿಗೆರ್ ವಹಿಸಿದ್ದರು. ಸುಳ್ಯ ತಹಶೀಲ್ದಾರ್ ಮಂಜುಳಾ, ಬಿಇಒ ಶೀತಲ್ ಯು.ಕೆ., ನ.ಪಂ. ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಸದಸ್ಯ ಧೀರಾ ಕ್ರಾಸ್ತಾ, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫಾ, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್, ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ, ಅಮೃತ ಮಹೋತ್ಸವ ಸಮಿತಿಯ ಎಂ.ಬಿ.ಸದಾಶಿವ, ಹಿರಿಯ ವಿದ್ಯಾರ್ಥಿ ಬಾಲಕೃಷ್ಣ, ಕಾಲೇಜು ಅಭಿವೃದ್ಧಿ ಸಮಿತಿಯ ಲಿಂಗಪ್ಪ, ಶಿಕ್ಷಣ ಇಲಾಖೆಯ ಧನಲಕ್ಷ್ಮಿ, ನ.ಪಂ. ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್, ಹಿರಿಯ ಶಿಕ್ಷಕ ಡಾ.ಸುಂದರ್ ಕೇನಾಜೆ ಮತ್ತಿತರರು ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿದರು. ಶಿಕ್ಷಕಿ ಚಂದ್ರಮತಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸನ್ಮಾನ :
ಕಟ್ಟಡ ನಿರ್ಮಾಣದ ದಾನಿಗಳಾದ ಗುರು ಪಾಂಗಾಳ, ಸಂದ್ಯಾ, ನಿರ್ಮಳಾ ಜಯ್, ಒಸಾಟ್ ಸಂಸ್ಥೆಯ ಬಾಲಕೃಷ್ಣ, ಕಿಶೋರ್, ಶ್ರೀಷಾ, ಲಕ್ಷ್ಮೀನಾರಾಯಣ, ಸೈಟ್ ಎಂಜೀನಿಯರ್ ನಾಗೇಶ್, ಹನುಮಂತ ಮೊದಲಾದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.







