ಅವಿಭಜಿತ ದ.ಕ. ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಮಂಗಳೂರು, ನ.29: ಭಾರತದ ಚಂದ್ರಮಾನವ ಎಂದು ಖ್ಯಾತಿ ಪಡೆದಿರುವ ಪದ್ಮಶ್ರೀ ಪುರಸ್ಕೃತ ಡಾ.ಮೈಲಸ್ವಾಮಿ ಅನ್ನಾದುರೈ, ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಶಾಲೆಯಲ್ಲಿ ನಿರ್ಮಿಸಲಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು.
ಇದು ಕೇವಲ ಖಗೋಳ ಪ್ರಯೋಗಾಲಯವಲ್ಲ, ಇದು ನಮ್ಮ ಬಾಹ್ಯಾಕಾಶ ಸಾಧನೆಯತ್ತ ಭವಿಷ್ಯದ ದೃಢ ಹೆಜ್ಜೆಯಾಗಬಲ್ಲದು ಎಂದು ಅವರು ಹೇಳಿದರು.
ಭಾರತವು ಇಂದು ಉಪಗ್ರಹ ಸಂವಹನದಿಂದ ನ್ಯಾವಿಗೇಶನ್ ವ್ಯವಸ್ಥೆ, ದೂರ ಸಂವಹನ, ಚಂದ್ರಯಾನ, ಮಂಗಳಯಾನ ಮುಂತಾದ ಸಾಧನೆಗಳ ಮೂಲಕ ಜಗತ್ತನ್ನು ತನ್ನತ್ತಾ ಸೆಳೆಯುತ್ತಿದೆ. ಭಾರತದ ಶಿಕ್ಷಣ ಪದ್ದತಿಯನ್ನು ಉಲ್ಲೇಖಿಸಿದ ಅವರು, ಶಾಲೆಗಳು ಇಂದಿನ ಅಂತರರಾಷ್ಟ್ರೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳನ್ನು ಹೊರತರುತ್ತಿದ್ದರೆ, ನಾಳೆಯ ವಿಜ್ಞಾನಿಗಳನ್ನು ಕೂಡ ರೂಪಿಸಬಲ್ಲ ಸಾಮರ್ಥ್ಯ ಹೊಂದಿದೆ ಎಂದರು.
ಭಾರತ, ಚಂದ್ರನಲ್ಲಿ ನೀರನ್ನು ಪತ್ತೆಹಚ್ಚಿದ ಸಾಧನೆಯನ್ನು ನೆನಪಿಸಿಕೊಂಡ ಅವರು, ಕೊಲಂಬಸ್ ಭಾರತವನ್ನು ಹುಡುಕುತ್ತ ಅಮೇರಿಕಾವನ್ನು ಕಂಡುಹಿಡಿದ. ಶತಮಾನಗಳ ನಂತರ, ಚಂದ್ರನಲ್ಲಿ ನೀರನ್ನು ಪತ್ತೆಹಚ್ಚುವಲ್ಲಿ ಅಮೆರಿಕಕ್ಕೆ ಸಾಧ್ಯವಾಗಲಿಲ್ಲ, ಆದರೆ ಭಾರತ ಅದನ್ನು ಸಾಧಿಸಿತು ಎಂದವರು ಹೇಳಿದರು.
ಮಹಾವೀರ ಕಾಲೇಜಿನ ಅಮೆಚೂರ್ ಆಸ್ಟ್ರೋನಾಮರ್ಸ್ ಕ್ಲಬ್‌ನ ಸಂಯೋಜಕ ಡಾ.ರಮೇಶ್ ಭಟ್ ಮಾತನಾಡಿ, ಬಾಹ್ಯಾಕಾಶ ಸಾಧನೆಯಲ್ಲಿ ಅಮೇರಿಕವು ಸಾಧಿಸದ ಹಂತವನ್ನೂ, ಭಾರತವು ತಲುಪಿದ್ದು ನಮ್ಮ ವಿಜ್ಞಾನಿಗಳ ಗುಣಮಟ್ಟಕ್ಕೆ ಸಾಕ್ಷಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿಷ್ಟಿತ ಸಂಸ್ಥೆಗಳಲ್ಲೇ ಶಿಕ್ಷಣ ಪಡೆಯಬೇಕೆಂದೇನಿಲ್ಲ. ಅನೇಕ ವಿಜ್ಞಾನಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದು ತಮ್ಮ ಶ್ರೇಷ್ಠತೆ ಮೆರೆದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಮೈಲಸ್ವಾಮಿ ಅನ್ನಾದುರೈಯನ್ನು ಆಳ್ವಾಸ್ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಮಂಗಳೂರಿನ ಸೇನಾ ನೇಮಕಾತಿ ಅಧಿಕಾರಿಗಳು, ಕರ್ನಲ್ ಸೋಮು ಮಹಾರಾಜ್, ಮೇಜರ್ ಅಭಿಜಿತ್ ಸಿಂಗ್, ನವ್ರಾಸ್ ಸ್ಪೇಸ್‌ಲ್ಯಾಬ್‌ನ ರವೀಂದ್ರನಾಥ್ ನಾಡೆಲ್ಲ ಹಾಗೂ ಶ್ರವಣ್, ಶಾಲೆಯ ಆಡಳಿತಾಧಿಕಾರಿ ಪ್ರೀತಮ್ ಕುಂದರ್, ಮೆಂಟರ್ ಅಶ್ವಿನ್ ಪೈ, ಪ್ರಾಂಶುಪಾಲೆ ಶೈಲಜಾ ಬೋಳ ಹೆಗ್ಡೆ ಉಪಸ್ಥಿತರಿದ್ದರು.
ಪ್ರಾಂಶುಪಾಲ ಮುಹಮ್ಮದ್ ಶಫಿ ಶೇಖ್ ಸ್ವಾಗತಿಸಿ, ಉಪನ್ಯಾಸಕ ವಿರನ್ ಕಾರ್ಯಕ್ರಮ ನಿರೂಪಿಸಿದರು.







