ಜಾತಿ ಗಣತಿ: ಜಾತಿ, ಉಪಜಾತಿ ಕುರಿತ ಪ್ರಶ್ನೆಗಳಿಗೆ ಮುಸ್ಲಿಮರು ನೀಡಬೇಕಾದ ಉತ್ತರ ಕುರಿತು ಮಾಹಿತಿ

ಮಂಗಳೂರು, ಸೆ.17: ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ನಡೆಸಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಬಗ್ಗೆ ಝೀನತ್ ಬಕ್ಷ್ ಜುಮಾ ಮಸೀದಿ ಹಾಗೂ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮ್ ಜಮಾಅತ್ ಗಳು ಹಾಗೂ ಸಂಘಟನೆಯ ಮುಖಂಡರುಗಳ ಸಭೆಯು ಬುಧವಾರ ಸಂಜೆ ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಊರ್ಮಿಳಾ ಬಿ. ಜಾತಿ ಗಣತಿ ಸಮೀಕ್ಷೆ ಹೇಗೆ ನಡೆಯಲಿದೆ, ಅದರಲ್ಲಿ ಮನೆ ಮನೆಗೆ ಬರುವ ಶಿಕ್ಷಕರು ಏನೇನು ಪ್ರಶ್ನೆ ಕೇಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದರು. ಬಳಿಕ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಸಮೀಕ್ಷೆಯ ಮಹತ್ವವನ್ನು ವಿವರಿಸಿ ಎಲ್ಲರೂ ಸಮೀಕ್ಷೆಯಲ್ಲಿ ತಪ್ಪದೆ ಭಾಗವಹಿಸಿ ಸರಿಯಾದ ಮಾಹಿತಿ ನೀಡುವಂತೆ ಕರೆ ನೀಡಿದರು. ಸಮೀಕ್ಷೆಗೆ ಬರುವ ಶಿಕ್ಷಕರಿಗೆ ಆದಷ್ಟು ಬೇಗ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
ಆ ಬಳಿಕ ಜಾತಿ ಗಣತಿಯಲ್ಲಿ ಧರ್ಮ, ಜಾತಿ ಹಾಗೂ ಉಪಜಾತಿಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ಬಗ್ಗೆ ಜಮಾಅತ್ ಹಾಗೂ ಸಂಘಟನೆಗಳ ಮುಖಂಡರ ಚರ್ಚೆ ನಡೆಯಿತು.
ಚರ್ಚೆ ಬಳಿಕ ತೆಗೆದುಕೊಂಡ ನಿರ್ಣಯಗಳು ಹೀಗಿವೆ:-
ಗಣತಿ ಸಂದರ್ಭ ಗ್ರಾಮವಾಸಿಗಳು ಹಾಗೂ ಹೆಚ್ಚು ಶಿಕ್ಷಿತರಲ್ಲದವರಿಗೆ ಇದೊಂದು ಹೊಸ ಅನುಭವವಾದ್ದರಿಂದ ಅವರು ಗಾಬರಿಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಮಾಜ ಸೇವಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಎಲ್ಲ ಸಂಘ ಸಂಸ್ಥೆಗಳ ಸಹಕಾರ ನೀಡಬೇಕು.
ಮಸೀದಿ, ಮದ್ರಸ, ಸಂಘಟನೆಗಳು, ಸ್ಥಳೀಯ ಜಮಾಅತ್, ಕಮಿಟಿಗಳು, ಯುವಜನ ಒಕ್ಕೂಟಗಳು ಮತ್ತು ಸಮುದಾಯದ ಸ್ವಯಂಸೇವಕರು ಮುಸ್ಲಿಮ್ ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಸಿದ್ಧತೆಗೆ ಸಮಯ ಕಡಿಮೆ ಇರುವುದರಿಂದ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
ಸಮುದಾಯದ ಎಲ್ಲ ವ್ಯಕ್ತಿಗಳು ಮತ್ತು ಕುಟುಂಬಗಳು, ಜಾತಿಗಣತಿಗೆ ಮಾನಸಿಕವಾಗಿ ಸಿದ್ಧರಾಗಿರಬೇಕು. ಗಣತಿಗೆ ತಮ್ಮ ಬಳಿಗೆ ಬರುವ ಸರಕಾರಿ ನೌಕರರನ್ನು ಆದರದಿಂದ ಸ್ವಾಗತಿಸಬೇಕು ಮತ್ತು ಸಂಪೂರ್ಣ ಸಹಕಾರ ನೀಡಬೇಕು.
ಸೆ.22ರ ಮುಂಚೆ ಪ್ರತಿಯೊಂದು ಕುಟುಂಬದವರು ತಮ್ಮ ಪಡಿತರ ಚೀಟಿ, ಕುಟುಂಬದ ಆರು ವರ್ಷಕ್ಕಿಂತ ಹೆಚ್ಚು ಪ್ರಾಯದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ (ಓಟರ್ ಐಡಿ) ಮತ್ತಿತರ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
ಪ್ರಶ್ನೆಗಳ ದೀರ್ಘ ಸರಮಾಲೆ ಕಂಡು ಗಾಬರಿಯಾಗದೆ, ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದರೆ ಸಾಕು. ಉತ್ತರ ಗೊತ್ತಿಲ್ಲದ ಪ್ರಶೆಗಳಿಗೆ, ಗೊತ್ತಿಲ್ಲ ಎಂದು ಉತ್ತರಿಸಬಹುದು.
ಪ್ರಶ್ನಾವಳಿಯ 8ನೇ ಕಾಲಂ ನಲ್ಲಿ Religion/ಧರ್ಮ ಕುರಿತು ವಿಚಾರಿಸಲಾಗಿದೆ. ಇಲ್ಲಿ ಎಲ್ಲ ಮುಸ್ಲಿಮರು 'ಇಸ್ಲಾಂ - Islam' ಎಂದು ಬರೆಸಬೇಕು.
ಪ್ರಶ್ನಾವಳಿಯ 9ನೇ ಕಾಲಂ ನಲ್ಲಿ ಜಾತಿ/Caste ಕುರಿತು ವಿಚಾರಿಸಲಾಗಿದೆ. ಇಲ್ಲಿ ಎಲ್ಲ ಮುಸ್ಲಿಮರು 'ಮುಸ್ಲಿಮ್'- Muslim ಎಂದು ಬರೆಸಬೇಕು.
ಪ್ರಶ್ನಾವಳಿಯ 10ನೇ ಕಾಲಂನಲ್ಲಿ ಉಪಜಾತಿ/ Sub Caste ಧರ್ಮ ಕುರಿತು ವಿಚಾರಿಸಲಾಗಿದೆ. ಇಲ್ಲಿ ಬ್ಯಾರಿ ಭಾಷೆಯವರು 'ಬ್ಯಾರಿ' ಎಂದು ಬರೆಸಬೇಕು. ಇತರ ಪಂಗಡಗಳಿಗೆ ಸೇರಿದವರು ತಮ್ಮ ಪಂಗಡದ ಹೆಸರನ್ನು ಬರೆಸಬಹುದು. ಉದಾ: ಖಾಸಾಬ್, ಕಸಾಯಿ, ಅಟಾರಿ ಮುಂತಾದ ನಿರ್ದಿಷ್ಟ ವರ್ಗಗಳಿಗೆ ಸೇರಿದವರು ಉಪಜಾತಿ ಕಾಲಂನಲ್ಲಿ ತಮ್ಮ ನಿರ್ದಿಷ್ಟ ವರ್ಗವನ್ನು ಹೆಸರಿಸಬಹುದು. ಅಥವಾ ಅಲ್ಲೂ 'ಮುಸ್ಲಿಮ್' ಎಂದೇ ಬರೆಸಬಹುದು.
ಪ್ರಶ್ನಾವಳಿಯ 15ನೇ ಕಾಲಂನಲ್ಲಿ ಮಾತೃಭಾಷೆ/ Mother Tongue ಕುರಿತು ವಿಚಾರಿಸಲಾಗಿದೆ. ಇಲ್ಲಿ ಬ್ಯಾರಿ ಭಾಷೆಯವರು 'ಬ್ಯಾರಿ' ಎಂದು ಬರೆಸಬೇಕು. ಉರ್ದು, ನವಾಯತ್ ಇತ್ಯಾದಿ ಭಾಷೆಯವರು ಮಾತೃ ಭಾಷೆಯ ಕಾಲಂ ನಲ್ಲಿ ತಮ್ಮ ಭಾಷೆಯನ್ನು ಹೆಸರಿಸಬಹುದು.
ಪ್ರಶ್ನಾವಳಿಯಲ್ಲಿ 60 ಪ್ರಶ್ನೆಗಳಿದ್ದು, ಆ ಪೈಕಿ ಅನೇಕ ಪ್ರಶ್ನೆಗಳು ಹೆಚ್ಚಿನವರಿಗೆ ಅನ್ವಯಿಸುವುದಿಲ್ಲ. ಅಂತಹ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿಲ್ಲ ಅಥವಾ ಗೊತ್ತಿಲ್ಲ ಎಂದೂ ಉತ್ತರಿಸಬಹುದು.
ಸಭೆಯಲ್ಲಿ ಝೀನತ್ ಭಕ್ಷ್ ಜುಮಾ ಮಸೀದಿಯ ಅಧ್ಯಕ್ಷ ಯೆನೆಪೊಯ ಅಬ್ದುಲ್ಲಾ ಕುಂಞಿ, ದಿ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್, ಎಸ್.ಎಂ.ರಶೀದ್ ಹಾಜಿ, ಹನೀಫ್ ಹಾಜಿ, ಅಬ್ದುಸ್ಸಲಾಂ ಪುತ್ತಿಗೆ, ಮಾಜಿ ಮೇಯರ್ ಅಶ್ರಫ್ ಸಹಿತ ಎಲ್ಲ ಪ್ರಮುಖ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.







