ಬೀಡಿ ಮಾಲಕರಿಂದ ಕಾರ್ಮಿಕರಿಗೆ ಅನ್ಯಾಯ : ಹೋರಾಟಕ್ಕೆ ಸಮಾನ ಮನಸ್ಕ ಸಂಘಟನೆಗಳ ಬೆಂಬಲ

ಮಂಗಳೂರು, ನ.21: ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ತುಟಿಭತ್ತೆಯನ್ನು 7 ವರ್ಷಗಳಿಂದ ಕೊಡದೆ ವಂಚಿಸುತ್ತಾ ಬಂದಿರುವ ಬೀಡಿ ಮಾಲಕರ ವಿರುದ್ಧ ಹಾಗೂ ಕನಿಷ್ಠ ಕೂಲಿ ಜಾರಿ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವ ಕಾರ್ಮಿಕ ಇಲಾಖೆಯ ಬೇಜವಾಬ್ದಾರಿತನವನ್ನು ಖಂಡಿಸಿ ನ.24ರಿಂದ ಬೀಡಿ ಕಾರ್ಮಿಕರು ನಡೆಸಲು ಉದ್ದೇಶಿಸಿರುವ ಅನಿರ್ದಿಷ್ಟಾವಧಿ ರಾತ್ರಿ ಹಗಲು ಧರಣಿ ಸತ್ಯಾಗ್ರಹಕ್ಕೆ ದ.ಕ.ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಬೆಂಬಲಿಸಲು ನಿರ್ಧರಿಸಿದೆ.
ನಗರದ ವಿಕಾಸ ಕಚೇರಿಯಲ್ಲಿ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ನಾಯಕ ಬಿ.ಎಂ. ಮಾಧವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಕಾರ್ಮಿಕ ಸಂಘಟನೆಯಾದ ಸಿಐಟಿಯು ತನ್ನ ಅಧೀನದಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳ ಯೂನಿಯನ್‌ಗಳ, ಮಧ್ಯಮ ವರ್ಗದ ನೌಕರರ ಸಂಘಟನೆಗಳ, ವಿದ್ಯಾರ್ಥಿ ಯುವಜನ, ಮಹಿಳಾ, ರೈತ, ದಲಿತ ಆದಿವಾಸಿ ಸೇರಿದಂತೆ ವಿವಿಧ ಸಾಮೂಹಿಕ ಜನಪರ ಸಂಘಟನೆಗಳ ಪ್ರಮುಖರ ಹಾಗೂ ಹಿತೈಷಿಗಳ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಲ್ಲದೆ ನ.28ರಂದು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಚಳುವಳಿಯಲ್ಲಿ ಪಾಲೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬೀಡಿ ಫೆಡರೇಶನ್ ಅಧ್ಯಕ್ಷ ಸುಕುಮಾರ್, ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ದಲಿತ ಚಳುವಳಿಯ ನಾಯಕ ಎಂ.ದೇವದಾಸ್, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಮಾತನಾಡಿದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮುನೀರ್ ಕಾಟಿಪಳ್ಳ, ಯಾದವ ಶೆಟ್ಟಿ, ಕೃಷ್ಣಪ್ಪಸಾಲ್ಯಾನ್, ಯೋಗೀಶ್ ಜಪ್ಪಿನಮೊಗರು, ಫಣೀಂದ್ರ ಕೆ, ರಮೇಶ್ ಉಳ್ಳಾಲ, ಬಿಎನ್ ದೇವಾಡಿಗ, ರೋನ್ಸನ್ ಡಿಸೋಜ, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜನಾರ್ದನ ಕುತ್ತಾರ್, ಚಂದ್ರಹಾಸ ಪಿಲಾರ್, ಅಶ್ರಫ್ ಹರೇಕಳ, ರಫೀಕ್ ಹರೇಕಳ, ರಿಜ್ವಾನ್ ಮುಡಿಪು,ಮನೋಜ್ ವಾಮಂಜೂರು, ಪ್ರಮೀಳಾ ದೇವಾಡಿಗ, ಯೋಗಿತಾ ಉಳ್ಳಾಲ, ಸಂತೋಷ್ ಆರ್ಎಸ್, ಪ್ಲೇವಿ ಕ್ರಾಸ್ತಾ ಅತ್ತಾವರ, ಶಾಲಿನಿ, ನರೇಂದ್ರ ಹೊಯಿಗೆ ಬೈಲ್,ರಾಧಾಕೃಷ್ಣ ಬೊಂಡಂತಿಲ, ರಾಕೇಶ್ ಕುಂದರ್, ಸಮರ್ಥ ಭಟ್ ಉಪಸ್ಥಿತರಿದ್ದರು.







