ಇನ್ನು ಜಾತ್ರಾ ಸಂತೆಗಳಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ: ಸುಧೀರ್ ಶೆಟ್ಟಿ
ಮಂಗಳೂರು ಮೇಯರ್ ಫೋನ್ ಇನ್; ಸಮಸ್ಯೆಗಳ ಇತ್ಯರ್ಥದ ಭರವಸೆ

ಮಂಗಳೂರು, ಅ.27: ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಜಾತ್ರಾ ಸಂತೆ ವ್ಯಾಪಾರಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಆಗುವಂತಹ ಆಹಾರ ಮಾರಾಟದ ಅಂಗಡಿಗಳು ಕಂಡುಬಂದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಶುಕ್ರವಾರ ಮೇಯರ್ ಕೊಠಡಿಯಲ್ಲಿ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿ.ಕೆ. ಭಟ್ ಎಂಬವರ ದೂರಿನ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುದ್ರೋಳಿಯಲ್ಲಿ ಮಟ್ಕಾ ಸೋಡಾ ಅಂಗಡಿಯೊಂದರ ವೈರಲ್ ವೀಡಿಯೋ ಕುರಿತಂತೆ ದಾಳಿ ನಡೆಸಿದ್ದ ಅಧಿಕಾರಿಗಳು ಆ ಅಂಗಡಿಯ ಸಾಮಗ್ರಿಗಳನ್ನು ವಶಪಡಿಸಿಕೊಂಡು ಕ್ರಮ ವಹಿಸಿದ್ದಾರೆ ಎಂದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುಧೀರ್ ಶೆಟ್ಟಿ ಕಣ್ಣೂರು ಅವರು ನಡೆಸಿದ 2ನೇ ಫೋನ್ ಇನ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರಕಿದ್ದು, ಗಂಟೆಯೊಂದರಲ್ಲಿ 26 ಮಂದಿ ಕರೆ ಮಾಡಿ ತಮ್ಮ ಅಹವಾಲುಗಳನ್ನು ತೋಡಿಕೊಂಡರು.
ಫಳ್ನೀರ್ ನಿವಾಸಿ 80ರ ಹರೆಯದ ಲೀನಾ ಪಿಂಟೋ ಎಂಬವರು ಕರೆ ಮಾಡಿ ಮನೆಯ ಎದುರುಗಡೆಯೇ ಕೆಲವರು ಕಸ ತಂದು ಹಾಕುತ್ತಿದ್ದು, ತೆಗೆಯುವ ಕೆಲಸ ಆಗಿಲ್ಲ. ಡೆಂಗ್ ಹಾವಳಿ ಹೆಚ್ಚಾಗಿದ್ದು, ಫಾಗಿಂಗ್ ಮಾಡಲಾಗುತ್ತಿಲ್ಲ ಎಂದು ದೂರಿದಾಗ, ಕ್ರಮ ವಹಿಸುವುದಾಗಿ ಮೇಯರ್ ತಿಳಿಸಿದರು.
ಹಬ್ಬದ ಸಂದರ್ಭ ಪರವೂರಿನಿಂದ ಬರುವ ಬಡ ಹೂವು ವ್ಯಾಪಾರಿಗಳು ಹಂಪನಕಟ್ಟೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮಾರಾಟ ಮಾಡಿ ಉಳಿದ ಹೂವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದು ಕೊಳೆತು ನಗರದ ಸೌಂದಯಕ್ಕೆ ಅಡ್ಡಿಯಾಗುತ್ತಿದೆ. ಅವರಿಗೆ ನಿರ್ದಿಷ್ಟ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿ.ಕೆ. ಭಟ್ ಮೇಯರ್ಗೆ ಮನವಿ ಮಾಡಿದರು.
ಕಾವೂರಿನ ರೇಗೋ ಎಂಬ ಹಿರಿಯ ಮಹಿಳೆ ಕರೆ ಮಾಡಿ, ಫುಟ್ಪಾತ್ ಮೇಲೆ ವಾಹನಗಳ ನಿಲುಗಡೆಯಾಗುತ್ತಿರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನೀವೊಮ್ಮೆ ಬಂದು ಪರಿಶೀಲಿಸಿ ಎಂದು ಒತ್ತಾಯಿಸಿದರು.
ಹಿಂದೆ ಕವಿತಾ ಸನಿಲ್ ಮೇಯರ್ ಆಗಿದ್ದಾಗ ಫೋನ್ ಇನ್ ಕಾರ್ಯಕ್ರಮ ಮಾಡುತ್ತಿದ್ದರು. ಆಗಲೂ ಕರೆ ಮಾಡಿ ಸಮಸ್ಯೆ ಹೇಳುತ್ತಿದ್ದೆ. ಮತ್ತೆ ಫೋನ್ ಇನ್ ಕಾರ್ಯಕ್ರಮ ಆರಂಭಿಸಿರುವುದು ಉತ್ತಮ ಕಾರ್ಯ ಎಂದು ಅವರು ಮೇಯರ್ ರನ್ನು ಶ್ಲಾಘಿಸಿದರು.
ಕಳೆದ ಬಾರಿ ಹೇಳಿಯೂ ಕ್ರಮವಾಗಿಲ್ಲ!
ವಸತಿ ಪ್ರದೇಶದಲ್ಲಿ ಗ್ಯಾಸ್ ಟ್ಯಾಂಕರ್ ಪಾರ್ಕಿಂಗ್ ಮಾಡಲಾಗುತ್ತಿದೆ. ಅನಧಿಕೃತ ನೀರು, ವಿದ್ಯುತ್ ಕೂಡಾ ಒದಗಿಸಲಾಗಿದೆ. ಕಳೆದ ಬಾರಿಯೂ ಫೋನ್ ಇನ್ನಲ್ಲಿ ಈ ಬಗ್ಗೆ ದೂರು ನೀಡಿದ್ದೆ. ಆದರೆ ಯಾವುದೇ ಕ್ರಮ ಆಗಿಲ್ಲ ಎಂದು ಸುರತ್ಕಲ್ ಕಾನಾದ ದಯಾನಂದ ಎಂಬವರು ದೂರಿದರು.
ಪಾಲಿಕೆಯಿಂದ ಈಗಾಗಲೇ ನೋಟಿಸ್ ನೀಡಲಾಗಿದೆ. ರವಿವಾರ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ವಹಿಸಲಿದ್ದಾರೆ ಎಂದು ಮೇಯರ್ ತಿಳಿಸಿದರು.
ರಸ್ತೆ ಬದಿ ಕಸ ಹಾಕುವವರಿಗೆ ದಂಡ ಹಾಕಿ
ಕೋಡಿಕಲ್ ಶಾಲೆ ಬಳಿಯ ಮುಖ್ಯ ರಸ್ತೆಯಲ್ಲೇ ಕಸ ಹಾಕುತ್ತಿದ್ದು, ದಂಡ ವಿಧಿಸುವ ಮೂಲಕ ಕ್ರಮ ವಹಿಸಬೇಕು ಎಂದು ನಾರ್ಸಿಯಾ ಎಂಬವರು ದೂರಿದಾಗ, ಆ ಜಾಗವನ್ನು ಬ್ಲಾಕ್ ಸ್ಪಾಟ್ ಆಗಿ ಗುರುತಿಸಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದಾಗಿ ಮೇಯರ್ ಹೇಳಿದರು.
ಎರಡು ಮ್ಯಾನ್ ಹೋಲ್ಗಳ ನಡುವಿನ ಪೈಪ್ ಲೈನ್ ತುಂಡಾಗಿ ಡ್ರೈನೇಜ್ ನೀರು ವಾಪಸ್ ಮನೆಗೆ ಬರುತ್ತಿದೆ ಎಂದು ಶ್ರೀಶ ಭಟ್ ಎಂಬವರು ದೂರಿದರೆ, ಮಾಲೆಮಾರ್ ಜಂಕ್ಷನ್ ಬಳಿ ಮಣ್ಣು ರಾಶಿ ಹಾಕಲಾಗಿರುವುದನ್ನು ತೆರವುಗೊಳಿಸಬೇಕು ಮತ್ತು ಕೊಂಚಾಡಿ ಲ್ಯಾಂಡ್ ಲಿಂಕ್ಸ್ನ ರಸ್ತೆ ದುರಸ್ತಿ ಮಾಡಬೇಕೆಂದು ಭಾಸ್ಕರ್ ಎಂಬವರು ಆಗ್ರಹಿಸಿದರು.
ಮಂದಾರ ಬೈಲ್ ನಲ್ಲಿ ಕಾಲುದಾರಿ ಹಾಳಾಗಿದ್ದು, ನಡೆದಾಡಲು ಯೋಗ್ಯವಾಗಿಸಬೇಕು. ಕೆಎಸ್ಸಾರ್ಟಿಸಿಯಿಂದ ಬಿಜೈ ರಸ್ತೆಯಲ್ಲಿ ಫುಟ್ ಪಾತ್ ಲ್ಲಿ ಪಾರ್ಕಿಂಗ್, ಅನಧಿಕೃತ ಅಂಗಡಿ ತೆರವುಗೊಳಿಸಬೇಕು. ಉಳ್ಳಾಲ ಹೊಯ್ಗೆ ಬಳಿ ಮನೆಗೆ ಹೋಗಲು ದಾರಿ ಮಾಡಿಸಿಕೊಡಿ, ದಡ್ಡಲ್ ಕಾಡ್ ರಸ್ತೆ ಬಳಿ ಹಂಪ್ಸ್ ಹಾಕಿಸಬೇಕು. ಕೊಡಿಯಾಲ್ ಗುತ್ತು ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಸಿ ರಸ್ತೆ ಮರುಸ್ಥಾಪಿಸುವ ಕೆಲಸ ಆಗಿಲ್ಲ. ಕಣ್ಣೂರು ಬಳಿ ಗದ್ದೆಯಲ್ಲಿ ನೀರು ನಿಂತು ವಾಸನೆ ಬರುತ್ತಿದ್ದು, ಸರಿಪಡಿಸಿ ಎಂದು ಸಾರ್ವಜನಿಕರು ಮೇಯರ್ ಅವರಿಗೆ ಫೋನ್ ಕರೆ ಮೂಲಕ ಮನವಿ ಮಾಡಿದರು.
2 ತಿಂಗಳಾದರೂ ಖಾತಾ ಸಿಕ್ಕಿಲ್ಲ!
ಆಗಸ್ಟ್ 22ರಂದು ಖಾತಾಕ್ಕೆ ಅರ್ಜಿ ಸಲ್ಲಿಸಿದ್ದೆ, ನಾಲ್ಕು ದಿನ ಬಿಟ್ಟ ಬರಲು ಹೇಳಿದಂತೆ ಹೋದಾಗ ಮತ್ತೆ ಒಂದು ವಾರ ಬಿಟ್ಟು ಬರಲು ಹೇಳಿದರು. ಹೀಗೆ 10 ಸಲ ಹೋದರೂ ಖಾತಾ ಸಿಕ್ಕಿಲ್ಲ. ಈಗ ಮತ್ತೆ ಆನ್ ಲೈನ್ ಅರ್ಜಿ ಸಲ್ಲಿಸಲು ಹೇಳುತ್ತಿದ್ದಾರೆ. ನಾನೇನು ಮಾಡಬೇಕು ಎಂದು ಕಾರ್ಸ್ಟ್ರೀಟ್ನ ಜಗದೀಶ್ ಕಾಮತ್ ದೂರಿದಾಗ, ಸೋಮವಾರ ಸಂಜೆ ನನ್ನ ಕೊಠಡಿಗೆ ಬಂದು ಖಾತಾ ಪಡೆದುಕೊಂಡು ಹೋಗಿ. ತಡವಾಗಲು ಕಾರಣವೇನೆಂದು ತಿಳಿದು, ತಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಮೇಯರ್ ಹೇಳಿದರು.
ಈ ಸಂದರ್ಭ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಕಾರ್ಯನಿರ್ವಾಹಕ ಅಧಿಕಾರಿ ನರೇಶ್ ಶೆಣೈ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







