ಭರವಸೆ ಸಮಿತಿ ವತಿಯಿಂದ ಯುಜಿಡಿ, ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಗಳ ಪರಿಶೀಲನೆ

ಮಂಗಳೂರು: ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾದ ಬಿ.ಎಂ. ಫಾರೂಕ್ ಅವರು ಉಳ್ಳಾಲದ ಕೋಡಿಯಲ್ಲಿರುವ ಮ್ಯಾನ್ ಹೋಲ್ ಸೀವರ್ ಲೈನ್ ಮತ್ತು ಮಲಿನ ನೀರು ಶುದ್ದೀಕರಣ ಘಟಕದ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಬಳಿಕ ಬಟ್ಟಪ್ಪಾಡಿ ಗೆ ತೆರಳಿದ ಅವರು, ಕಡಲ್ಕೊರೆತ ದಿಂದಾಗಿರುವ ಹಾನಿ ಮತ್ತು ಅದಕ್ಕೆ ಸಂಬಂಧಿಸಿ ಮಾಡಬೇಕಾದ ಪರಿಹಾರ ಕಾರ್ಯ ಚಟುವಟಿಕೆ ಬಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರು ಕಡಲ್ಕೊರೆತ ತಡೆಗಟ್ಟಲು ತಡೆಗೋಡೆ ಕಾಮಗಾರಿ ಆಗಬೇಕು. ತಡೆಗೋಡೆ ಆರಂಭಿಸುವ ಮೊದಲು ರೂಪುರೇಷೆಗಳನ್ನು ಸಿದ್ಧಪಡಿಸಬೇಕಾಗುತ್ತದೆ.ಯಾವ ರೀತಿ ಕಾಮಗಾರಿ ಮಾಡಿದರೆ ತಡೆಗೋಡೆ ಉಳಿಯಬಹುದು ಎನ್ನುವುದು ಮುಖ್ಯ.ಈ ಬಗ್ಗೆ ಮೊದಲು ಚರ್ಚಿಸಿ, ಎಲ್ಲಾ ಸಿದ್ಧತೆಗಳನ್ನು ನಡೆಸಿದ ಬಳಿಕ ಕಾಮಗಾರಿ ಆರಂಭಿಸಿದರೆ ತಡೆಗೋಡೆ ಉಳಿಸಬಹುದು ಎಂದು ಸಲಹೆ ನೀಡಿದರು. ಇಲ್ಲಿನ ಕಾಮಗಾರಿ ಗೆ ಮೊದಲು ಬಜೆಟ್ ಸಿದ್ದಪಡಿಸಿ ಶಾಶ್ವತ ಕಾಮಗಾರಿ ಆರಂಭಿಸಬೇಕಾಗಿದೆ ಎಂದು ಭರವಸೆ ಸಮಿತಿ ಅಧ್ಯಕ್ಷ ಬಿ.ಎಂ.ಫಾರೂಕ್ ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರುಗಳಾದ ಪಿ.ಎಚ್. ಪೂಜಾರ್, ಎಸ್. ರುದ್ರೇಗೌಡ, ಡಾ. ತಳವಾರ್ ಸಾಬಣ್ಣ ಹಾಗೂ ತಿಪ್ಪಣ್ಣಪ್ಪ, ಡಾ. ತೇಜಸ್ವಿನಿ, ಭೋಜೇ ಗೌಡ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾ ಧಿಕಾರಿ ಡಾ. ಆನಂದ್ ಕೆ. ಆರೋಗ್ಯ ಇಲಾಖೆ, ಮೀನುಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆ, ಪಶು ಸಂಗೋಪನೆ ಇಲಾಖೆ, ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ, ಅಗ್ನಿ ಶಾಮಕ ದಳ ಕಂದಾಯ ಇಲಾಖೆ, ಮೀನುಗಾರಿಕಾ ಇಲಾಖೆಯ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿದ್ದರು.







