ನ.4ರಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಕೋಸ್ಟಲ್ ಎಂಎಸ್‌ಎಂಇ , ಸ್ಟಾರ್ಟ್‌ಅಪ್ ಕಾನ್ಕ್ಲೇವ್

ಮಂಗಳೂರು, ಅ.31:ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಪ್ರಾಂತೀಯ ಮಂಡಳಿಯು ‘ಕೋಸ್ಟಲ್ ಎಂಎಸ್‌ಎಂಇ ಮತ್ತು ಸ್ಟಾರ್ಟ್‌ಅಪ್ ಕಾನ್ಕ್ಲೇವ್ 2023’ ನ.4ರಂದು ಅಲೋಶಿಯಸ್ ಕಾಲೇಜಿನ ರಸ್ಕಿನಾ ಹಾಲ್‌ನಲ್ಲಿ ನಡೆಯಲಿದೆ ಎಂದು ಐಸಿಐಎ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಗೌತಮ್ ನಾಯಕ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಗ್ಗೆ 9:30ಕ್ಕೆ ಐಸಿಎಐ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಸಿ.ಎ. ಅರುಣ್ ಎ.ವಿ. ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದ ಗಣ್ಯರು ಮತ್ತು ಮುಖ್ಯ ಅತಿಥಿಗಳು ಉಪಸ್ಥಿತರಿರುವರು. ಸಮಾವೇಶವನ್ನು ನಾನಾ ವಿಷಯಗಳ ಮೇಲೆ 7 ತಾಂತ್ರಿಕ ಸೆಷನ್‌ಗಳನ್ನು ಬೆಂಗಳೂರು ಹಾಗೂ ಇತರ ಭಾಗಗಳ ಸಂಪನ್ಮೂಲ ವ್ಯಕ್ತಿಗಳಿಂದ ನೆರವೇರಲಿದೆ. ಯುವಕರು ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆ ಸೇರಿದಂತೆ ನಾನಾ ವಿಷಯಗಳಲ್ಲಿ ತಜ್ಞರೊಂದಿಗೆ ನೇರ ಸಂವಾದ ನಡೆಯಲಿದೆ ಎಂದರು.
ಸಮಾವೇಶದಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಚಾರ್ಟರ್ಡ್ ಅಕೌಂಟೆಂಟ್ಸ್, ಶಿಕ್ಷಣ ತಜ್ಞರು, ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಮತ್ತು ವಾಣಿಜ್ಯ ಕಾಲೇಜು ಫ್ಯಾಕಲ್ಟಿ ಮತ್ತು ವಿದ್ಯಾರ್ಥಿ ಗಳು, ಎಂಎಸ್‌ಎಂಇ ಉದ್ಯಮಿಗಳು, ಸ್ಟಾರ್ಟ್ ಅಪ್‌ಗಳು, ಬ್ಯಾಂಕರ್‌ಗಳು, ವೃತ್ತಿಪರರು, ಮಹತ್ವಾಕಾಂಕ್ಷಿ ಉದ್ಯಮಿಗಳು, ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಜೆ 6:30ಕ್ಕೆ ಅವಾರ್ಡ್ ನೈಟ್ ಆಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ನಾವೀನ್ಯತೆ, ನಾಯಕತ್ವಘಿ, ಸಮರ್ಪಣೆ ಮತ್ತು ಬದ್ಧತೆಯ ಮೂಲಕ ಅತ್ಯುತ್ತಮ ಸಾಧನೆಗಳನ್ನು ಹೊಂದಿರುವ ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರೇಣು ಕೆ. ನಾಯರ್ ನೆರವೇರಿಸಲಿರುವರು. ಸಿ.ಎ. ಪನ್ನಾರಾಜ್ ಎಸ್ ಹಾಗೂ ಇತರ ಅತಿಥಿ ಗಣ್ಯರು ಭಾಗವಹಿಸಲಿರುವರು. ಸಮಾವೇಶದಲ್ಲಿ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಎ ಎಸ್‌ಎಸ್ ನಾಯಕ್, ಸೈಂಟ್ ಅಲೋಶಿಯಸ್ ಕಾಲೇಜ್ ಪ್ರಾಂಶುಪಾಲ ರೆವೆರೆಂಡ್ ಡಾ. ಪ್ರವೀಣ್ ಮಾರ್ಟಿಸ್, ಡೀನ್ ಡಾ. ಆದರ್ಶ್ ಗೌಡ, ಐಸಿಎಐ ಮಂಗಳೂರು ಶಾಖೆ ಅಧ್ಯಕ್ಷ ಸಿ.ಎ. ಗೌತಮ್ ನಾಯಕ್, ಉಪಾಧ್ಯಕ್ಷ ಸಿ.ಎ. ಗೌತಮ್ ಪೈ ಡಿ ಉಪಸ್ಥಿತರಿದ್ದರು.







