ವೇಗದ ಸುದ್ದಿಯಿಂದ ತೆರೆಗೆ ಸರಿದ ತನಿಖಾ, ಅಭಿವೃದ್ಧಿ ಪತ್ರಿಕೋದ್ಯಮ: ಕೆ.ವಿ. ಪ್ರಭಾಕರ್

ಮಂಗಳೂರು, ಆ.16: ಡಿಜಿಟಲ್ ಮೀಡಿಯಾವು ವಿಸ್ತಾರಗೊಳ್ಳುತ್ತಾ ಸಾಗುತ್ತಿರುವಂತೆಯೇ ವೇಗದ ಸುದ್ದಿ (ಫಾಸ್ಟ್ ನ್ಯೂಸ್)ಯ ಧಾವಂತದಿಂದ ಅಭಿವೃದ್ಧಿ ಹಾಗೂ ತನಿಖಾ ಪತ್ರಿಕೋದ್ಯಮ ತೆರೆಗೆ ಸರಿಯುತ್ತಿದೆ ಎಂದು ಕರ್ನಾಟಕ ರಾಜ್ಯ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಜಿಟಲ್ ಮಾಧ್ಯಮದಿಂದಾಗಿ ಸುಳ್ಳು ಸುದ್ದಿಗಳ ಪ್ರಸಾರವೂ ಹೆಚ್ಚುತ್ತಿದ್ದು, ರಾಜ್ಯ ಮಟ್ಟದಲ್ಲಿ ಫ್ಯಾಕ್ಟ್ ಚೆಕ್ ಟೀಮ್ ಸುಳ್ಳು ಸುದ್ದಿ ಹರಡತ್ತಿರುವ ಬಗ್ಗೆ ನಿಗಾ ವಹಿಸುತ್ತಿದೆ ಎಂದರು.
ಸುಳ್ಳು ಸುದ್ದಿ ಹರಡುವ ಸಾಮಾಜಿಕ ಜಾಲತಾಣಗಳ ಮೇಲೆ ನೇರವಾಗಿ ಕ್ರಮ ವಹಿಸಲು ಸಾಧ್ಯವಾಗದ ಕಾರಣ ಸೈಬರ್ ಕ್ರೈಂನಡಿ ಇಂತಹ ಸುಳ್ಳು ಸುದ್ದಿ ಹರಡುವ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲು ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ತಯಾರಿ ನಡೆಯುತ್ತಿದೆ ಎಂದವರು ಹೇಳಿದರು.
ಸುದ್ದಿಮನೆಯಲ್ಲಿ ಸದ್ದು ಇಲ್ಲದೆ ಕೆಲಸ ಮಾಡುವ ಪತ್ರಕರ್ತರ ಜೀವನ ದಯನೀಯವಾಗಿದೆ. ಸೇವಾ ಭದ್ರತೆ ಇಲ್ಲವಾಗಿದೆ. ಇದನ್ನು ಪರಿಗಣಿಸಿರುವ ನೂತನ ಸರಕಾರ ಪತ್ರಕರ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.
ಸಮರ್ಪಕ ಜಾಹೀರಾತು ನೀತಿಯ ಮೂಲಕ ಡಿಜಿಟಲ್ ಮಾಧ್ಯಮಕ್ಕೂ ಅವುಗಳ ಸೇವಾಧಿಯ ಆಧಾರದಲ್ಲಿ ಸೌಲಭ್ಯ ಕಲ್ಪಿಸುವುದು, ಸೂಕ್ತ ಪಿಂಚಣಿ ವ್ಯವಸ್ಥೆ ಬಗ್ಗೆ ಸರಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ನಿವೃತ್ತ ಪತ್ರಕರ್ತರ ಪಿಂಚಣಿಯನ್ನು ಮಾಸಿಕ 10,000 ರೂ.ಗಳಿಗೆ ಏರಿಕೆ ಮಾಡಿದ್ದರು. ಅದೀಗ 12,000 ರೂ.ಗಳಾಗಿದೆ. ಆದರೆ ರಾಜ್ಯದಲ್ಲಿ ಈ ಪಿಂಚಣಿ ಪಡೆಯುತ್ತಿರುವ ಪತ್ರಕರ್ತರ ಸಂಖ್ಯೆ 249 ಮಾತ್ರ. ಮೃತ ಪತ್ರಕರ್ತರ ಅವಲಂಬಿತರಿಗೆ ಸಿಗುವ ಪಿಂಚಣಿ ಸೌಲಭ್ಯ ಕೇವಲ 45 ಮಂದಿ ಮಾತ್ರ ಪಡೆಯುತ್ತಿದ್ದಾರೆ. ಕೆಲವೊಂದು ಕಟ್ಟುನಿಟ್ಟಿನ ಮಾರ್ಗಸೂಚಿಗಳಿಂದಾಗಿ ಅರ್ಹ ನಿವೃತ್ತ ಪತ್ರಕರ್ತರಿಗೆ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅದನ್ನು ಸಡಿಸಲಗೊಳಿಸುವ ನಿಟ್ಟಿನಲ್ಲಿಯೂ ನೂತನ ಸರಕಾರ ಚರ್ಚೆ ನಡೆಸಿದೆ. ದ.ಕ. ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಭಾಗ್ಯ ಒದಗಿಸುವುದು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್‌ಪಾಸ್ ಸೌಲಭ್ಯ, ಆರೋಗ್ಯ ರಕ್ಷಣೆಗಾಗಿ ಪತ್ರಕರ್ತರನ್ನು ಯಶಸ್ವಿನಿ ಯೋಜನೆಗೊಳಪಡಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದವರು ಹೇಳಿದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರಿಗೆ ಮಾನ್ಯತಾ ಪತ್ರಕ್ಕೆ ಸೇವಾವಧಿ ಪರಿಗಣನೆ
ಪತ್ರಕರ್ತರಿಗೆ ಪತ್ರಿಕಾ ಮಾನ್ಯತಾ ಪತ್ರ ನೀಡುವ ವಿಚಾರದಲ್ಲಿ ಪತ್ರಿಕೆಯ ಪ್ರಸರಣ ಸಂಖ್ಯೆ ಬದಲು ಸೇವಾ ಅವಧಿಯ ಮಾನದಂಡ ಪರಿಗಣಿಸುವ ನಿಟ್ಟಿನಲ್ಲಿ ಸರಳಗೊಶಿಲಗಾಉವುದು. ಪ್ರಸ್ತುತ ಆಯಾ ಪತ್ರಿಕೆಗಳ ಪ್ರಸರಣ ಸಂಖ್ಯೆಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತಿರುವುದರಿಂದ ಅರ್ಹ ಪತ್ರಕರ್ತರು ಮಾನ್ಯತಾ ಪತ್ರದಿಂದ ವಂಚಿತರಾಗುತ್ತಿದ್ದಾರೆ. ಪತ್ರಕರ್ತರ ಹಿರಿತನವನ್ನು ಮಾನದಂಡವಾಗಿ ಪರಿಗಣಿಸಲು ನಿಯಮ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.







