ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ನೀಡುವುದು ಸರಿಯಲ್ಲ: ರಮಾನಾಥ ರೈ ಆಕ್ರೋಶ

ಬಂಟ್ವಾಳ : ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ನೀಡು ವುದು ಸರಿಯಲ್ಲ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿರುವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಾವು ಪ್ರತಿನಿಧಿಸುವ ಸಮುದಾಯಕ್ಕೆ ನೋವಾದಾಗ ಆ ಸಮುದಾಯದ ನಾಯಕರಾಗಿ ತಮಗಾದ ನೋವನ್ನು ವ್ಯಕ್ತಪಡಿಸುವುದು, ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದು ಸಹಜವಾಗಿದೆ. ಈ ನಿಟ್ಟಿನಲ್ಲಿ ಅಮಾಯಕ ಯುವಕನ ಕಗ್ಗೊಲೆ ಬಗ್ಗೆ ಪಕ್ಷದ ಕೆಲ ಅಲ್ಪಸಂಖ್ಯಾತ ಮುಖಂಡರು ಅವರ ಸಮುದಾಯ ಕ್ಕಾದ ಅನ್ಯಾಯದ ನೋವನ್ನು ತೋರಿಸಲು ಹಾಗೂ ನ್ಯಾಯಕ್ಕಾಗಿ ಆಗ್ರಹಿಸಲು ಸಭೆ ಕರೆದಿದ್ದರು. ಇದು ಸಹಜ ಪ್ರಕ್ರಿಯೆ. ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಾಗಿ ಅಲ್ಲ. ಬದಲಾಗಿ ತಮ್ಮ ನೋವನ್ನು ತೋರಿಸುವ ಸಲುವಾಗಿ ಆಗಿದೆ. ಆದರೆ ಅಂತಹವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ನೀಡುವುದು ಸರಿಯಲ್ಲ ಎಂದು ರಮಾನಾಥ ರೈ ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯಾತೀತ ಶಕ್ತಿಗಳು ವಿಭಜನೆ ಆಗಬಾರದು. ಜಾತ್ಯಾತೀತ ಶಕ್ತಿಗಳು ದುರ್ಬಲವಾದರೆ ಮತೀಯ ಶಕ್ತಿಗಳು ವಿಜೃಂಭಿಸಲು ಅವಕಾಶ ಮಾಡಿದಂತಾಗುತ್ತದೆ. ಪಕ್ಷದೊಳಗಿನ ವಿಚಾರವನ್ನು ನೋವಾದ ಸಮುದಾಯದ ಮಂದಿಗಳನ್ನು ಕರೆದು ವಿಚಾರಿಸಿ ಅದಕ್ಕೆ ಪರಿಹಾರ ಕಂಡು ಕೊಳ್ಳುವುದು ನಿಜವಾದ ನಾಯಕತ್ವದ ಗುಣ. ಈ ಸಂದರ್ಭ ನಾಯಕರಾದವರು ಪ್ರಜ್ಞಾವಂತಿಕೆ ಮೆರೆಯ ಬೇಕು. ಈ ಬಗ್ಗೆ ಪಕ್ಷದ ವರಿಷ್ಠರು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬಂಟ್ವಾಳದಲ್ಲಿ ಧರ್ಮಾಧಾರಿತ ಹತ್ಯೆಗಳು ಮತ್ತೆ ನಡೆದಿರುವುದು ತೀವ್ರ ಖೇದಕರ. ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಖಲಂದರ್ ಶಾಫಿ ಮೇಲಿನ ಹತ್ಯಾ ಯತ್ನ ಘಟನೆ ಎಂಬುದು ಮಾನವೀಯತೆಗೇ ಸವಾಲಾಗಿ ನಡೆದಿರುವುದು ಅತ್ಯಂತ ವಿಷಾದನೀಯ. ಇಂತಹ ಘಟನೆಗಳು ತೀವ್ರ ಖಂಡನೀಯವಾಗಿದೆ. ಇದೊಂದು ನಂಬಿಕೆ ದ್ರೋಹದ ಘಟನೆಯಾಗಿದೆ. ಎಲ್ಲ ಸಂದರ್ಭದಲ್ಲಿ ನಡೆದ ಮತೀಯ ಘಟನೆಗಳಿಗೂ ಭಿನ್ನವಾದ ಘಟನೆ ಇದು. ಕೊಲೆಯಾದ ರಹಿಮಾನ್ ಮನೆಗೆ ಸ್ಥಳೀಯ ಹಿಂದೂ ಮುಖಂಡರೇ ಭೇಟಿ ನೀಡಿ ಸಾಂತ್ವನ ಹೇಳಿರುವುದೇ ಇದನ್ನು ಸಾಕ್ಷಿಕರಿಸುತ್ತದೆ ಎಂದ ರಮಾನಾಥ ರೈ ಅವರು ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಒಪ್ಪತಕ್ಕದ್ದಲ್ಲ. ಈ ಬಗ್ಗೆ ಕಠಿಣ ಕ್ರಮಕ್ಕೆ ಈಗಾಗಲೇ ಸರಕಾರ ಕ್ರಮ ಕೈಗೊಳ್ಳುತ್ತಾ ಇದೆ. ಇಂತಹ ಘಟನೆಗಳಲ್ಲಿ ಸೂತ್ರದಾರರ ಬಂಧನವೇ ಇಂತಹ ಕೃತ್ಯಗಳಿಗೆ ಅಂತ್ಯ ಹಾಡಲು ಸೂಕ್ತ ಕ್ರಮ ಎಂದರು.
ಇದೊಂದು ನೇರವಾದ ದ್ವೇಷದಿಂದ ಉಂಟಾದ ಕೃತ್ಯವಲ್ಲ. ಬದಲಾಗಿ ಪಿತೂರಿಯಿಂದ ಆಗಿರುವಂತ ಕೃತ್ಯ ಎಂಬುದು ಸಾಬೀತಾಗಿದೆ. ಜಿಲ್ಲೆಯ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪನೆ ಮಾಡಿ ಕಠಿಣ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ ಅವರು, ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ನಾಗರಿಕ ಸಮಾಜ ಕೂಡಾ ಇಂತಹ ಕಿಡಿಗೇಡಿಗಳಿಂದ ಬಹಳಷ್ಟು ಜಾಗರೂಕರಾಗಿರ ಬೇಕಾಗಿದೆ. ಇಂತಹ ಘಟನೆಗಳಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಯಾರೂ ಕೂಡಾ ರಾಜಕೀಯ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಮನುಷ್ಯನ ಪ್ರಾಣ ಬಹಳ ಮುಖ್ಯವಾಗಿದ್ದು, ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ಕಠಿಣ ನಿಲುವು ತಾಳಬೇಕಾಗಿರುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸರು ಸ್ವತಂತ್ರವಾಗಿ ತನಿಖೆ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂದು ಅವರು ಹೇಳಿದರು.
ಇದೇ ವೇಳೆ ತಾಲೂಕಿನಲ್ಲಿ ಡೆಂಗ್ಯೂ ಜ್ವರ ಮತ್ತೆ ಸದ್ದು ಮಾಡಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಕಾಲಿಕವಾಗಿ ಎಚ್ಚೆತ್ತುಕೊಂಡು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಮಾನಾಥ ಆಗ್ರಹಿಸಿದರು.
ಈ ಸಂದರ್ಭ ಪ್ರಮುಖರಾದ ಪಿಯೂಸ್ ಎಲ್.ರೋಡ್ರಿಗಸ್, ಬೇಬಿ ಕುಂದರ್, ಬಿ.ಎಂ.ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಜಯಂತಿ ಪೂಜಾರಿ, ಪದ್ಮನಾಭ ರೈ, ಸುದರ್ಶನ್ ಜೈನ್, ಪದ್ಮಶೇಖರ್ ಜೈನ್, ಮಧುಸೂದನ ಶೆಣೈ, ವಾಸು ಪೂಜಾರಿ, ದೇವಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.







