ಆದಿವಾಸಿ ಕೊರಗ ಸಮುದಾಯದ ಜನರ ಬದುಕಿನೊಡನೆ ಚೆಲ್ಲಾಟವಾಡುವ ಐಟಿಡಿಪಿ ಇಲಾಖೆ: ಸುನಿಲ್ ಕುಮಾರ್ ಬಜಾಲ್ ಆಕ್ರೋಶ

ಮಂಗಳೂರು: ಆದಿವಾಸಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗಾಗಿ ಸದಾ ಶ್ರಮಿಸಬೇಕಾಗಿದ್ದ ಐಟಿಡಿಪಿ ಇಲಾಖೆಯು ತನ್ನ ಕರ್ತವ್ಯವನ್ನು ಮರೆತು ಜನ ವಿರೋಧಿಯಾಗಿ ವರ್ತಿಸುತ್ತಿದೆ. ಆದಿವಾಸಿ ಕೊರಗ ಸಮುದಾಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಐಟಿಡಿಪಿ ಇಲಾಖೆಯ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ವಸತಿ ಯೋಜನೆಯ ಫಲಾನುಭವಿಗಳಿಗೆ ಸುಮಾರು ಎಂಟು ತಿಂಗಳಿನಿಂದ ಸಹಾಯಧನದ ಕಂತು ಬಿಡುಗಡೆ ಮಾಡದೆ ಸತಾಯಿಸುತ್ತಿರುವುದರ ವಿರುದ್ಧ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೆರೆಕಾಡು ಘಟಕದ ನೇತೃತ್ವದಲ್ಲಿ ಬುಧವಾರ ನಗರದ ಕೊಟ್ಟಾರದಲ್ಲಿರುವ ಐಟಿಡಿಪಿ ಕಚೇರಿಯ ಮುಂದೆ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಶೋಷಿತ ಸಮುದಾಯವಾದ ಕೊರಗ ಸಮುದಾಯದ ಬದುಕನ್ನು ಉತ್ತಮ ಪಡಿಸಲು ಪ್ರಾಮಾಣಿಕ ಪ್ರಯತ್ನ ಪಡಬೇಕಾದ ಸರಕಾರವು ಆದಿವಾಸಿಗಳ ಹಕ್ಕನ್ನು ಕಸಿಯಲು ಹೊರಟಿರುವುದು ಖಂಡನೀಯ ಎಂದರು.
ಆದಿವಾಸಿ ಹಕ್ಕುಗಳ ಸಮಿತಿಯ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಕರಿಯ ಕೆ., ಕೃಷ್ಣ ಇನ್ನ, ರಶ್ಮಿ ವಾಮಂಜೂರು, ತುಳಸಿ ಪಡುಬಿದ್ರೆ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ವಿವಿಧ ಸಂಘಟನೆಗಳ ನಾಯಕಾರದ ಅಶೋಕ್ ಶ್ರೀಯಾನ್, ಶೇಖರ್ ವಾಮಂಜೂರು, ಅಭಿಜಿತ್, ಶಶಿಧರ್, ಕೇಶವ, ಮನೋಹರ್, ರಮೇಶ್ ಕೆರೆಕಾಡು, ರವೀಂದ್ರ, ಕಿಶನ್, ಪ್ರಶಾಂತ್ ಕಂಕನಾಡಿ, ನವೀನ್ ಕಂಕನಾಡಿ, ನಿಶ್ಚಿರಾ, ಮಂಜುಳಾ, ಪೂರ್ಣಿಮಾ, ಶ್ವೇತಾ, ಸುಶೀಲಾ ವಹಿಸಿದ್ದರು.







