ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ನಿವಾಸಕ್ಕೆ ಐವನ್ ಡಿ ಸೋಜ ಭೇಟಿ
ಮಂಗಳೂರು, ಮೇ 29: ಎರಡು ದಿನಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲುವಿನ ಅಬ್ದುಲ್ ರಹಿಮಾನ್ ಅವರ ಮನೆಗೆ ಗುರುವಾರ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಭೇಟ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜ ಘಾತುಕ ಶಕ್ತಿಗಳು ಧರ್ಮದ ಜಾತಿಯ ಆಧಾರದಲ್ಲಿ ಅಮಾಯಕರನ್ನು ಹತ್ಯೆ ಮಾಡುತ್ತಿರುವುದು ಖಂಡನೀಯ. ಇದೊಂದು ಸಮಾಜಕ್ಕೆ ಡೊಡ್ಡ ಕಂಟಕವಾಗಿ ಮಾರ್ಪಟ್ಟಿದೆ. ಇದನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಇದರ ಹಿಂದೆ ಇರುವ ಘಾತುಕ ಶಕ್ತಿಯನ್ನು ಹುಡುಕಿ ಮಟ್ಟಹಾಕಲು ಸರಕಾರ ಬದ್ಧವಾಗಿದೆ ಎಂದರು.
ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಿಳಿಸಲಾಗಿದೆ. ಗೃಹಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸಮಾಜದಲ್ಲಿ ಶಾಂತಿ ನೆಲೆಸಲು ಬೇಕಾದ ಕ್ರಮ ಕೈಗೊಳ್ಳುವುದರ ಜೊತೆಗೆ ಪ್ರಚೋದನಕಾರಿ ಭಾಷಣಗಳ ಬಗ್ಗೆ ಪೊಲೀಸರು ತೆಗೆದುಕೊಳ್ಳಬೇಕಾದ ತೀರ್ಮಾನದ ಬಗ್ಗೆ ಸರಕಾರವು ಪುನರ್ ಪರಿಶೀಲನೆ ನಡೆಸಲಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಕಲಂದರ್ ಶಾಫಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಜಿಲ್ಲಾ ಪಂ. ಮಾಜಿ ಸದಸ್ಯ ಇಬ್ರಾಹೀಂ ಅಡ್ಡೂರು, ವಲಯ ಅಧ್ಯಕ್ಷ ವಸಂತ, ಪಂಚಾಯತ್ ಸದಸ್ಯರಾದ ಎ.ಕೆ. ಅಶ್ರಫ್, ಹನೀಫ್, ಹಬಿಬುಲ್ಲಾ ಕಣ್ಣೂರು ಮುಂತಾದವರು ಜೊತೆಗಿದ್ದರು.







