ಜಲಾಲ್‌ಬಾಗ್: ಅಂಗನವಾಡಿ ಕೇಂದ್ರ ಉದ್ಘಾಟನೆ

ದೇರಳಕಟ್ಟೆ: ಕಡಿಮೆ ಅನುದಾನದಲ್ಲಿ ಅತಿ ಹೆಚ್ಚು ಸವಲತ್ತುಗಳೊಂದಿಗೆ ರಾಜ್ಯಕ್ಕೆ ಮಾದರಿಯಾಗಿ ಜಲಾಲ್‌ಬಾಗ್ ಅಂಗನವಾಡಿ ಕೇಂದ್ರ ನಿರ್ಮಾಣಗೊಂಡಿದ್ದು, ಇದು ಊರಿನ ಜನರ ಗೌರವ ಹಾಗೂ ಸ್ವಾಭಿಮಾನದ ಸಂಕೇತ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಲಾಲ್‌ಬಾಗ್ ೨ನೇ ಅಡ್ಡ ರಸ್ತೆ ಬಳಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಿಟಿ) ಯೋಜನೆಯ 10 ಲಕ್ಷ ರೂ. ಅನುದಾನದಡಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರ ನಿರ್ಮಿಸಲು ಸ್ಥಳದಾನ ನೀಡಿದ ವಕೀಲ ಮುಹಮ್ಮದ್ ಆಲಿ ಹಾಗೂ ಉತ್ತಮ ಗುಣಮಟ್ಟ ಕಾಪಾಡಿ ಕೊಂಡು ಕಟ್ಟಡ ರಚಿಸಿದ ಗುತ್ತಿಗೆದಾರ ಮುಹಮ್ಮದ್ ಶ್ಲಾಘನೆಗೆ ಅರ್ಹರು. ಪ್ರಾಮಾಣಿಕತೆ ಬದ್ಧತೆಯಿಂದ ಕೆಲಸ ಮಾಡಿ ದಾಗ ಜನರಿಗೆ ಮೋಸವೂ ಆಗದು. ಗುತ್ತಿಗೆದಾರನಿಗೆ ನಷ್ಟವೂ ಆಗದು. ಸರಕಾರದ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದು ಸ್ಥಳೀಯ ಜನಪ್ರತಿನಿಧಿಗಳ ಕೆಲಸ ಎಂದು ಯು.ಟಿ.ಖಾದರ್ ಹೇಳಿದರು.
ಈ ಸಂದರ್ಭ ಸ್ಪೀಕರ್ ಯು.ಟಿ.ಖಾದರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ, ಸ್ಥಳದಾನಿ ವಕೀಲ ಯು.ಮುಹಮ್ಮದ್ ಅಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸೀತಾ ಕೆ. ಇವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮುಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ, ಕೋಟೆಕಾರು ಪಪಂ ಸದಸ್ಯೆ ಆಯಿಷಾ ಡಿ ಅಬ್ಬಾಸ್, ಡಿ.ಎಂ. ಮುಹಮ್ಮದ್, ಕೋಟೆಕಾರು ಪಪಂ ಮುಖ್ಯಾಧಿಕಾರಿ ಮಾಲಿನಿ, ಬೆಳ್ಮ ಗ್ರಾಪಂ ಮಾಜಿ ಅಧ್ಯಕ್ಷ ಹರ್ಷರಾಜ್ ಮುದ್ಯ, ಅರಫಾ ಮಸೀದಿಯ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಉದ್ಯಮಿಗಳಾದ ಪ್ರಕಾಶ್, ಇಬ್ರಾಹಿಂ ಕತಾರ್ ಉಪಸ್ಥಿತರಿದ್ದರು.
ಶೈಲಾ ಕೆ. ಕಾರಿಗಿ ಸ್ವಾಗತಿಸಿದರು. ಹಸನ್ ಅಲಿ ವಂದಿಸಿದರು. ಹಮೀದ್ ಪಜೀರು ಕಾರ್ಯಕ್ರಮ ನಿರೂಪಿಸಿದರು.







