ಜ.11 , 12: ರಾಜ್ಯ ಮಟ್ಟದ ವಿಶೇಷ ಒಲಂಪಿಕ್

ಮಂಗಳೂರು, ಜ.8: ಲಯನ್ಸ್ ಕ್ಲಬ್ ವೆಲೆನ್ಸಿಯಾ ವಿವಿಧ ಸಂಘಟನೆಗಳ ಸಹಯೋಗದಲ್ಲಿ ರಾಜ್ಯ ಮಟ್ಟದ ವಿಶೇಷ ಒಲಂಪಿಕ್ ಜ.11 ಮತ್ತು 12ರಂದು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯೋಜಿಸಿದೆ ಎಂದು ಸಂಚಾಲಕ ಲೆಸ್ಲಿ ಡಿಸೋಜ ತಿಳಿಸಿದ್ದಾರೆ.
ನಗರದ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸಂಸ್ಥೆಯು 30 ವರ್ಷಗಳಿಂದ ಅನಾಥ ಮಕ್ಕಳ ಒಲಂಪಿಕ್ಸ್, ವಿಶೇಷ ಮಕ್ಕಳ ಒಲಂಪಿಕ್ಸ್ ಸೇರಿದಂತೆ ಅನೇಕ ಕ್ರೀಡಾ ಚಟುವಟಿಕೆ ನಡೆಸುತ್ತಿದೆ. ಈ ಬಾರಿ ರಾಜ್ಯದ ವಿವಿಧೆಡೆಯ 400 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಎಲ್ಲ ಸ್ಪರ್ಧಿಗಳಿಗೆ ಸಾರಿಗೆ, ವಸತಿ, ಆಹಾರದ ವ್ಯವಸ್ಥೆಯನ್ನು ಲಯನ್ಸ್ ಕ್ಲಬ್ ಮೂಲಕ ಮಾಡಲಾಗುತ್ತದೆ’ ಎಂದರು.
ಜ.12ರಂದು ಬೆಳಗ್ಗೆ 9:30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317 ಡಿ ಗವರ್ನರ್ ಅರವಿಂದ ಶೆಣೈ, ಪತ್ರಕರ್ತ ವಾಲ್ಟರ್ ನಂದಳಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ನಿರ್ದೇಶಕ ಪ್ರದೀಪ ಡಿಸೋಜ ಮತ್ತಿತರರು ಭಾಗವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ವೆಲೆನ್ಸಿಯಾ ಅಧ್ಯಕ್ಷ ವಲ್ಸಾ ಜೀವನ್, ಪ್ರಮುಖರಾದ ಜೆರೋಮ್ ಕ್ಯಾಸ್ತಲಿನೊ, ಸಿರಿಲ್ ಜೀವನ್, ನಾರಾಯಣ ಶೇರಿಗಾರ್, ಪ್ರಶಾಂತ್, ಸುಮಲತಾ ಉಪಸ್ಥಿತರಿದ್ದರು.





