ಜೋಕಟ್ಟೆ ಗಂಭೀರ ಖಾಯಿಲೆಗಳ ಗೂಡಾಗಿದೆ: ನಾಗರಿಕ ಹೋರಾಟ ಸಮಿತಿ ಆಕ್ರೋಶ

ಸುರತ್ಕಲ್ : ಜೋಕಟ್ಟೆಯಲ್ಲಿ ಎಂಆರ್ಪಿಎಲ್ ನಿರ್ಮಿಸಿದ ನರಕ, ಮನೆಯ ಒಳಗಡೆಗೆ ಪೆಟ್ ಕೋಕ್ ಪೌಡರ್, ಊರು ಗಂಭೀರ ಖಾಯಿಲೆಗಳ ಗೂಡಾಗಿದೆ ಎಂದು ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಆಕ್ರೋಶ ವ್ಯಕ್ತಪಡಿಸಿದೆ.
ಉದ್ಯೋಗ ಸೃಷ್ಟಿ, ಸಕಾರಾತ್ಮಕ ಅಭಿವೃದ್ಧಿಯ ಕನಸುಗಳನ್ನು ಬಿತ್ತಿ ತುಳುನಾಡಿನ ಸಾವಿರಾರು ಎಕರೆ ಅಮೂಲ್ಯ ಜಮೀನಿನಲ್ಲಿ ಸಾಮ್ರಾಜ್ಯ ಕಟ್ಟಿಕೊಂಡಿರುವ ಎಂ.ಆರ್.ಪಿ.ಎಲ್. ಉದ್ಯೋಗ ಸೃಷ್ಟಿಸಿದ್ದೂ ಕಡಿಮೆ, ಸ್ಥಳೀಯರಿಗೆ ನೀಡಿದ್ದು ಅತಿ ಕಡಿಮೆ. ಮೊದಲ ಹಂತಗಳಲ್ಲಿ ಜಮೀನು ಕಳೆದು ಕೊಂಡ ಕುಟುಂಬಗಳಿಗೆ ನಿಯಮಗಳ ಕಾರಣಕ್ಕೆ ಉದ್ಯೋಗ ಒದಗಿಸಿದ ಕಂಪೆನಿ ಈಗ ನಾಲ್ಕನೆ ಹಂತದಲ್ಲಿ ಸಾವಿರ ಎಕರೆ ಜಮೀನು ಸ್ವಾಧೀನದ ಸಂದರ್ಭ ಜಮೀನು ಕಳೆದುಕೊಂಡ ಕುಟುಂಬಗಳಿಗೆ ವಿವಿಧ ತಂತ್ರಗಳನ್ನು ಪ್ರಯೋಗಿಸಿ ಉದ್ಯೋಗ ನೀಡುವುದರಿಂದ ಅಧಿಕೃತವಾಗಿಯೆ ಜಾರಿಕೊಳ್ಳುತ್ತಿದೆ ಎಂದಿದೆ.
ಅದೇ ಸಂದರ್ಭ ಸುತ್ತಲಿನ ಗ್ರಾಮಗಳನ್ನು ತನ್ನ ಪೆಟ್ರೋಕೆಮಿಕಲ್ ಮಾಲಿನ್ಯದಿಂದ ರೋಗಗಳ ಕೊಂಪೆಯಾಗಿಸಿದೆ. ಅಲ್ಲಿನ ಅಸಹಾಯಕ ಗ್ರಾಮಸ್ಥರ ಬದುಕನ್ನು ನರಕ ಸದೃಶಗೊಳಿಸಿದೆ. ಇಲ್ಲಿ ಕೇಳುವವರೂ ಇಲ್ಲ, ಹೇಳುವವರೂ ಇಲ್ಲ. 2014 ರಲ್ಲಿ ಮೂರನೆ ಹಂತದ ಪೆಟ್ ಕೋಕ್,ಸಲ್ಪರ್ ಘಟಕದಿಂದ ಚಳಿಗಾಲದ ಮಂಜಿನಂತೆ ಅಪಾಯಕಾರಿ ಕೋಕ್,ಸಲ್ಪರ್ ಹುಡಿ ಊರಿನ ಮೇಲೆ, ಬಾವಿಗಳು ಸಹಿತ ನೀರಿನ ಮೂಲಗಳ ಮೇಲೆ, ಮನೆಯ ಅಡುಗೆ ಮನೆ, ಊಟದ ಬಟ್ಟಲಿನ ಮೇಲೆ ಸುರಿಯುವುದು ಶುರುವಾದಾಗ ನಾವು ಪ್ರಬಲ ಹೋರಾಟ ನಡೆಸಿ ಕಂಪೆನಿಯನ್ನು ಮಣಿಸಿದ್ದೆವು. ರಾಜ್ಯ ಸರಕಾರ ಆರು ಅಂಶಗಳ ಪರಿಹಾರ ಕ್ರಮಗಳ ಆದೇಶ ಹೊರಡಿಸಿತ್ತು. ಅದರಲ್ಲಿ ಐದು ಆದೇಶಗಳನ್ನು ಕಂಪೆನಿ ಜಾರಿಗೆ ತಂದಿದೆ ಎಂದು ಹೇಳಿಕೊಳ್ಳುತ್ತಿದೆ. ಆರನೆ ಅಂಶವಾದ ಜನವಸತಿ ಹಾಗೂ ಕಂಪೆನಿಯ ನಡುವೆ ಹಸಿರು ವಲಯ ನಿರ್ಮಿಸುವ ಆದೇಶ ಜಾರಿಗೆ ತರಲು ಸತಾಯಿಸುತ್ತಿದೆ ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.
ಐದು ಅಂಶಗಳ ಜಾರಿಯ ತರುವಾಯವೂ ಶಬ್ದ, ವಾಸನೆ (ವಾಯು) ಮಾಲಿನ್ಯ ತೀರಾ ಕಡಿಮೆ ಏನೂ ಆಗಿರಲಿಲ್ಲ. ಸಾಧಾರಣ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ, ಅತಿ ಅಪಾಯಕಾರಿ ಕೋಕ್ ಪುಡಿ ಮಂಜಿನಂತೆ ಸುರಿಯು ವುದು ನಿಂತಿತ್ತು. ಗ್ರಾಮಸ್ಥರು ಒಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟರೂ ಚರ್ಮದ ಖಾಯಿಲೆ, ಉಸಿರಾಟದ ಸಮಸ್ಯೆ, ಶ್ವಾಸಕೋಶದ ಖಾಯಿಲೆ, ಹೃದಯದ ಸಮಸ್ಯೆಗಳ ಸಹಿತ ಪೆಟ್ ಕೋಕ್, ಸಲ್ಪರ್ ಸಂಬಂಧಿಸಿ ವಿವಿಧ ಖಾಯಿಲೆಗಳು ಜನರನ್ನು ದೊಡ್ಡ ಪ್ರಮಾಣದಲ್ಲಿ ಕಾಡುತ್ತಿತ್ತು.
ಎಂಆರ್ ಪಿಎಲ್ ಕಂಪೆನಿಗಂತು ಲಾಭ ಮಾತ್ರ ಮುಖ್ಯ. ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಈ ಕುರಿತು ಕನಿಷ್ಠ ಕಾಳಜಿಯಾದರು ಇರಬೇಕಲ್ಲ ? ಜನತೆಯೂ ಮೈ ಕೊಡವಿ ಮಾತಾಡಬೇಕಲ್ಲ ? ಈ ಮಾರಕ ಪೆಟ್ ಕೋಕ್, ಸಲ್ಪರ್ ಮಾಲಿನ್ಯವನ್ನು ಅನ್ನ, ನೀರು, ಉಸಿರಾಟದ ಜೊತೆಗೆ ಹೊಟ್ಟೆ, ಶ್ವಾಸಕೋಶಕ್ಕೆ ಸೇರಿಸಿಕೊಂಡು ಜನರ ಆರೋಗ್ಯದ ಸ್ಥಿತಿ ಹೇಗಿರಬಹುದು, ಮಕ್ಕಳ ಆರೋಗ್ಯ ಏನಾಗಿರ ಬೇಡ ಎಂದು ಹೋರಾಟ ಸಮಿತಿ ಜಿಲ್ಲಾಡಳಿತವನ್ನು ಪ್ರಶ್ನಿಸಿದೆ.
ಮಾತಾಡಬೇಕಾದವರು, ಜನರ ಆರೋಗ್ಯ, ಜೀವ ರಕ್ಷಿಸಬೇಕಾದವರು ಯಾರು ? ಎಂಆರ್ಪಿಎಲ್ ನ ವೇದಿಕೆಗಳಲ್ಲಿ ಮೆರೆಯುವವರು, ಅವರ ಕೊಡುಗೆಗಳನ್ನು ಕೊಂಡಾಡುವವರಿಗೆ ಎಂಆರ್ ಪಿ ಎಲ್ ಸೃಷ್ಟಿಸಿರುವ ಈ ನರಕಗಳು ಕಣ್ಣೆಗೆ ಬೀಳುವುದು ಯಾವಾಗ ಎಂದು ಅದು ಖಾರವಾಗಿ ತನ್ನ ಆಕ್ರೋಶವ್ಯಕ್ತಪಡಿಸಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ಜೋಕಟ್ಟೆಯ ನಲ್ಕೆಮಾರ್ ಪ್ರದೇಶಕ್ಕೆ ಹೋರಾಟ ಸಮಿತಿಯ ಪ್ರಮುಖರ ಜೊತೆ ಭೇಟಿ ನೀಡಿದಾಗ ಪೆಟ್ ಕೋಕ್‌ನ ಪೌಡರ್ ಮನೆಯ ಒಳಗಡೆ, ತೆರೆದ ಬಾವಿಗಳು, ಟೆರೇಸ್ ಗಳ ಮೇಲೆ, ಕಿಟಕಿಯ ಸಂಧಿಗಳಲ್ಲಿ ದಟ್ಟವಾಗಿ ಕೂತಿರುವುದನ್ನು ಸ್ಥಳೀಯರು ತೋರಿಸಿದರು. ಇದೇ ತೆರೆದ ಬಾವಿಯ ನೀರು ಕುಡಿದು "ಬದುಕು" ವ ಅಸಹಾಯಕತೆಯನ್ನು ಹೇಳಿಕೊಂಡರು. ತಮ್ಮ ದೂರು ಕೇಳಲು ಯಾರೂ ಸಿದ್ದರಿಲ್ಲದ ಹತಾಷ ಪರಿಸ್ಥಿತಿಯನ್ನು ನಮ್ಮ ಮುಂದಿಟ್ಟರು ಎಂದು ನಾಗರಿಕ ಹೋರಾಟ ಸಮಿತಿ ಜೋಕಟ್ಟೆಯ ಸಂಚಾಲಕ ಮುನೀರ್ ಕಾಟಿಪಳ್ಳ ಅಸಮಾಧ ವ್ಯಕ್ತಪಡಿಸಿದರು.







