ಮಂಗಳೂರು ವಕೀಲರ ಸಂಘದಿಂದ ನ್ಯಾ. ಮುರಳಿಧರ ಪೈಗೆ ಸನ್ಮಾನ

ಮಂಗಳೂರು, ಜ.17: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕಗೊಂಡು ಇದೀಗ ಧಾರವಾಡ ಹೈಕೋರ್ಟ್ ಪೀಠದಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿ ಮುರಳಿಧರ್ ಪೈ ಯವರನ್ನು ಮಂಗಳೂರು ವಕೀಲರ ಸಂಘದಿಂದ ಸನ್ಮಾನಿಸಲಾಯಿತು.
ಜಿಲ್ಲಾ ನ್ಯಾಯಾಲಯದಲ್ಲಿ ಲೋಕಾಯುಕ್ತ ನ್ಯಾಯಾಧೀಶರಾಗಿ, ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಆಗಿ ನೇಮಕಗೊಂಡು ಹೈಕೋರ್ಟ್ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಮುರಳಿಧರ್ ಪೈ ಗೌರವವನ್ನು ಸ್ವೀಕರಿಸಿ ಮಾತನಾಡಿ‘ ತನ್ನ ಹುಟ್ಟೂರು ಕಾರ್ಕಳವಾದರೂ ತಾನು ನ್ಯಾಯಾಧೀಶನಾಗಿ ಹೆಚ್ಚಿನ ಸೇವೆಯನ್ನು ಮಂಗಳೂರಿನಲ್ಲಿ ಸಲ್ಲಿಸಿದ ಕಾರಣ ಮಂಗಳೂರು ತಮಗೆ ತವರು ಮನೆ ಇದ್ದಂತೆ, ಇಲ್ಲಿನ ಪ್ರತಿಭಾವಂತ ವಕೀಲರ ನಡುವೆ ಸೇವೆ ಸಲ್ಲಿಸಿದ ಅನುಭವ ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಬಸವರಾಜ್ ವಹಿಸಿದ್ದರು.
ಉಪಾಧ್ಯಕ್ಷರಾದ ಸುಜಿತ್ ಕುಮಾರ್, ಜೊತೆ ಕಾರ್ಯದರ್ಶಿ ಜ್ಯೋತಿ, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಬಿ ಇಬ್ರಾಹೀಂ, ವಿಧಾನ ಪರಿಷತ್ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ರಾಜ್ಯ ವಕೀಲರ ಪರಿಷತ್ನ ಮಾಜಿ ಉಪಾಧ್ಯಕ್ಷ ಟಿ ಎನ್ ಪೂಜಾರಿ, ಸಂಘದ ಮಾಜಿ ಅಧ್ಯಕ್ಷ ಎಂ ಆರ್ ಬಳ್ಳಾಲ್, ಅಶೋಕ ಅರಿಗ, ಶಂಭು ಶರ್ಮ, ಪೃಥ್ವಿರಾಜ್ ರೈ, ನರಸಿಂಹ ಹೆಗಡೆ, ಇತರ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್ ವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್ ವಂದಿಸಿ, ಕಾರ್ಯಕ್ರಮನ್ನು ನಿರೂಪಿಸಿದರು.







