ಕೆ. ಷರೀಫಾ ಅವರ ‘ನೀರೊಳಗಣ ಕಿಚ್ಚು’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

ಮಂಗಳೂರು, ನ.6: ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2022ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಗೆ ಹಿರಿಯ ಸಾಹಿತಿ, ಚಿಂತಕಿ, 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತೆ ಕೆ. ಷರೀಫಾ ಅವರ ‘ನೀರೊಳಗಣ ಕಿಚ್ಚು’ ಕಥಾಸಂಕಲನ ಆಯ್ಕೆಯಾಗಿದೆ.
ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ 2017ರಲ್ಲಿ ನಿವೃತ್ತಿ ಹೊಂದಿರುವ ಕೆ. ಷರೀಫಾ ಮುಸ್ಲಿಮ್ ಸಮುದಾಯದಿಂದ ಕನ್ನಡಕ್ಕೆ ಬಂದ (1975) ಮೊದಲ ಕವಿಯತ್ರಿ. ಕರ್ನಾಟಕ ಉರ್ದು ಸಾಹಿತ್ಯ ಅಕಾಡಮಿ, ಹಂಪಿ ಕನ್ನಡ ವಿವಿಯ ಸಿಂಡಿಕೇಟ್, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ (ಬೆಳಗಾವಿ), ರಾಷ್ಟ್ರಕವಿ ಆಯ್ಕೆ ಸಮಿತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಆಯ್ಕೆ ಸಮಿತಿಗಳ ಸದಸ್ಯೆಯಾಗಿ, ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕಿಯಾಗಿ, ದೇವರಾಜ ಅರಸು ಶತಮಾನೋತ್ಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯೆ ಯಾಗಿ ಸೇವೆ ಸಲ್ಲಿಸಿರುವ ಕೆ. ಷರೀಫಾ ಹಲವು ಪ್ರಮುಖ ಸಂಘ- ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ.
ಮಹಿಳೆ ಮತ್ತು ಸಮಾಜ, ಬಂಡಾಯ ಮುಸ್ಲಿಮ್ ಸಂವೇದನೆ, ಮುಸ್ಲಿಮ್ ಲೋಕದ ತಲ್ಲಣಗಳು, ಬತ್ತಳಿಕೆ, ಅಮ್ಮ ಮತ್ತು ಯುದ್ಧ, ಮುಸ್ಲಿಂ ಸಂವೇದನೆಯ ಕಾವ್ಯ, ಮಹಿಳೆ, ಚಳುವಳಿ ಮತ್ತು ರಾಜಕಾರಣ, ಹಲವು ಹೆಜ್ಜೆಗಳ ಸದ್ದು ಇವು ಕೆ. ಷರೀಫಾರವರ ಪ್ರಕಟಿತ ವಿಮರ್ಶಾ ಕೃತಿಗಳಾಗಿವೆ.
ಬಿಡುಗಡೆಯ ಕವನಗಳು, ನೂರೇನ್‌ಳ ಅಂತರಂಗ, ಪಾಂಚಾಲಿ, ಮಮ್ತಾಜಳ ಮಹಲು, ಬುರ್ಖಾ ಪ್ಯಾರಡೈಸ್, ಸಂತ ಪಕೀರಳ ಜೋಳಿಗೆಯ ರೊಟ್ಟಿ ಮತ್ತು ಬಯಲಿಗೂ ಬಾಗಿಲು ಇವರ ಪ್ರಕಟಿತ ಕವನ ಸಂಕಲನಗಳು. ನೌಕರರ ಮಿಲನ, ಹೊಸ ಶತಮಾನದ ಕಾವ್ಯ, ಗೀತಾ ನಾಗಭೂಷಣ ಮಹಿಳಾ ಮಾರ್ಗ ಮತ್ತು ಒಡನಾಡಿ ಅರಸು ಇವರ ಪ್ರಕಟಿತ ಸಂಪಾದನಾ ಕೃತಿಗಳು ಹಾಗೂ ಮುಸಿಂ ಮಹಿಳಾ ಸಂವೇದನೆ (ಸಂಶೋದನೆ), ಫೈಜ್ ನಾಮಾ (ಅನುವಾದ) ಮತ್ತು ಮಿರ್ಜಾ ಗಾಲಿಬ್(ವ್ಯಕ್ತಿ ಚಿತ್ರಣ) ಇವರ ಇತರ ಪ್ರಕಟಿತ ಕೃತಿಗಳು.
ಇವರ ಅನೇಕ ಕವಿತೆ ಮತ್ತು ಲೇಖನಗಳು ರಾಜ್ಯದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಅನೇಕ ವಿವಿ ಅಧೀನದಲ್ಲಿರುವ ಪದವಿ ಕಾಲೇಜುಗಳ ಪಠ್ಯಗಳಿಗೆ ಸೇರ್ಪಡೆಯಾಗಿದೆ. ಕೆ. ಷರೀಫಾ ಅವರ ಸಾಹಿತ್ಯ ಕೃಷಿಯ ಬಗ್ಗೆ ಗುಲ್ಬರ್ಗಾ ಮತ್ತು ತುಮಕೂರು ವಿವಿಗಳ ವಿದ್ಯಾರ್ಥಿಗಳಿಂದ ಪಿಎಚ್‌ಡಿ ಮತ್ತು ಎಂಫಿಲ್ ಅಧ್ಯಯನಗಳು ನಡೆದಿವೆ.
ವನಿತಾ ಸಾಹಿತ್ಯ ಶ್ರೀ ಅತ್ತಿಮಬ್ಬೆ, ನಲ್ಲೂರ್ ಪ್ರಸಾದ್, ಅಂಕ, ಸಿದ್ದಲಿಂಗ ಪಟ್ಟಣ ಶೆಟ್ಟಿ, ವೀಚಿ, ಡಾ. ಅನುಪಮಾ, ಡಾ. ಗೀತಾ ದೇಸಾಯಿ, ಗಡಿನಾಡ ಗೌರವ, ನಾಡ ಪ್ರಭು ಕೆಂಪೇಗೌಡ, ಕವಿ ಸರ್ವಜ್ಞ ಹಾಗೂ ಬಸವ ಚೈತನ್ಯ ಮುಂತಾದ ಪ್ರಮುಖ ಪ್ರಶಸ್ತಿಗಳು ಇವರ ಸಾಹಿತ್ಯ ಸಾಧನೆಗೆ ದೊರೆತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೆ. ಷರೀಫಾ ಅವರ ಜೀವಮಾನದ ಸೇವೆಗಾಗಿ ಗೌರವ ಪ್ರಶಸ್ತಿ ನೀಡಿ ಆದರಿಸಿದೆ.
ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ನ.23ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಹಿರಿಯ ಚಿಂತಕ ಪ್ರೊ. ಮುಝಪ್ಫರ್ ಅಸಾದಿ, ಹಿರಿಯ ಸಾಹಿತಿ ಬಾನು ಮುಷ್ತಾಕ್ ಮತ್ತು ಪ್ರಾಧ್ಯಾಪಕ ಪ್ರೊ ಹೈದರ್ ಅಲಿ ತೀರ್ಪುಗಾರರಾಗಿ ಸಹಕರಿಸಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







