ಜೂ.2ರಿಂದ ಕಲ್ಲಡ್ಕ ಫ್ಲೈ ಓವರ್ ವಾಹನ ಸಂಚಾರಕ್ಕೆ ಮುಕ್ತ
ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ಆರಂಭ

ಮಂಗಳೂರು, ಮೇ 28: ಕಳೆದ ಸುಮಾರು 8 ವರ್ಷಗಳಿಂದ ನಡೆದ ಕಾಮಗಾರಿಯ ಬಳಿಕ ಕೊನೆಗೂ ಕಲ್ಲಡ್ಕ ಫ್ಲೈ ಓವರ್ ಸಾರ್ವಜನಿಕ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಜೂ. 2ರಿಂದ ಪ್ರಾಯೋಗಿಕವಾಗಿ ಬೆಂಗಳೂರಿನಿಂದ ಮಂಗಳೂರು ಭಾಗದ ರಸ್ತೆಯನ್ನು ಪ್ರಾಯೋಗಿಕವಾಗಿ ಸಂಚಾರ ಮುಕ್ತಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ಬಳಿಕ ಮತ್ತೊಂದು ಬದಿ ಸಂಚಾರ ಮುಕ್ತಗೊಳಿಸಲು ತೀರ್ಮಾನಿಸಲಾಗಿದೆ. ಫ್ಲೈ ಓವರ್ ನ ಎರಡೂ ಬದಿಯ ಕಾಮಗಾರಿ ಪೂರ್ಣಗೊಂಡಿದೆ. ಫ್ಲೈ ಓವರ್ನ ಲೋಡ್ ಟೆಸ್ಟಿಂಗ್ ಕಾರ್ಯವೂ ನಡೆದಿದೆ. ನರಹರಿ ಪರ್ವತದ ಮುಂಭಾಗದಲ್ಲಿ ಸುಮಾರು 300 ಮೀಟರ್ ಹೆದ್ದಾರಿ ಕೆಲಸ ಬಾಕಿ ಇದೆ. ಹಾಗಾಗಿ ಸದ್ಯ ಫ್ಲೈ ಓವರ್ ನ ಒಂದು ಬದಿಯ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ ಎಂದು ರಾ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫ್ಲೈ ಓವರ್ ನ ಪಿಲ್ಲರ್ ಗಳ ನಡುವೆ ಗರ್ಡರ್ ಅಳವಡಿಕೆ ಪೂರ್ಣಗೊಂಡಿವೆ. ಒಂದು ಪಾರ್ಶ್ಚದಲ್ಲಿ ಅಂತಿಮ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿದೆ.
ಬಿ.ರೋಡ್ನಿಂದ ಅಡ್ಡಹೊಳೆವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿ 2017ರಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ 821 ಕೋಟಿ ರೂ.ಗಳಿಗೆ ವಹಿಸಲಾಗಿತ್ತು. ಹಲವು ಕಾರಣಗಳಿಂದ ವಿಳಂಬಗೊಂಡ ಕಾಮಗಾರಿ ನಡುವೆ ಸ್ಥಗಿತಗೊಂಡಿತ್ತು. 2021ರಲ್ಲಿ 64 ಕಿ.ಮೀ. ಉ್ದದ ಹೆದ್ದಾರಿಯನ್ನು 49 ಕಿ.ಮೀ. ಹಾಗೂ 15 ಕಿ.ಮೀ. ಆಗಿ ವಿಭಾಗಿಸಿ ಹೈದರಾಬಾದ್ ನ ಕೆಎನ್ಆರ್ ಕನ್ಸ್ಟ್ರಕ್ಷನ್ಸ್ ಹಾಗೂ ಮಹಾರಾಷ್ಟ್ರದ ಎಂ. ಔತಡೆ ಪ್ರೈ. ಲಿ.ಮಿ. ಕಂಪೆನಿಗಳಿಗೆ ಗುತ್ತಿಗೆ ವಹಿಸಲಾಗಿತ್ತು. ಪಾಣೆಮಂಗಳೂರು, ಮೆಲ್ಕಾರ್, ಮಾಣಿ, ನೆಕ್ಕಿಲಾಡಿ, ಉಪ್ಪಿನಂಗಡಿ ಜಂಕ್ಷನ್, ಉಪ್ಪಿನಂಗಡಿ- ಸುಬ್ರಹ್ಮಣ್ಯ ಕ್ರಾಸ್, ನೆಲ್ಯಾಡಿ, ಪೆರಿಯಶಾಂತಿಗಳಲ್ಲಿ ಓವರ್ ಪಾಸ್ ಮೇಲ್ಸೇತುವೆ ಹಾಗೂ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈ ಓವರ್ ಕಾಮಗಾರಿ ಏಕಕಾಲದಲ್ಲಿ ಆರಂಭಿಸಲಾಗಿತ್ತು.
2.1 ಕಿ.ಮೀ. ಉದ್ದದ ಫ್ಲೈ ಓವರ್ ನಲ್ಲಿ 30 ಮೀಟರ್ಗಳ ಅಂತರದಲ್ಲಿ 70 ಪಿಲ್ಲರ್ ಗಳಿವೆ. ಷಟ್ಪಥ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಕೃಷ್ಣಕೋಡಿಯಿಂದ ಆರಂಭಗೊಂಡು ಕುದ್ರೆಬೆಟ್ಟುವಿನಲ್ಲಿ ಫ್ಲೈ ಓವರ್ ಅಂತ್ಯಗೊಳ್ಳುತ್ತದೆ. ಈ ಫ್ಲೈ ಓವರ್ನಲ್ಲಿ ಸಂಚಾರ ಆರಂಭವಾದರೆ ಬಿ.ಸಿ.ರೋಡ್, ಪುತ್ತೂರು, ಉಪ್ಪಿನಂಗಡಿ ಮಧ್ಯೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.
ಅಡ್ಡಹೊಳೆಯಿಂದ ಪೆರಿಯಶಾಂತಿವರೆಗಿನ 15.130 ಕಿ.ಮೀ.ಗಳ ಪೈಕಿ 14.4 ಕಿ.ಮೀ.ಗಳ ಚತುಷ್ಪಥದ ಕಾಮಗಾರಿ ಪೂರ್ಣಗೊಂಡಿದೆ. ಹಾಗೆಯೇ, ಪೆರಿಯಶಾಂತಿಯಿಂದ ಬಂಟ್ವಾಳದವರೆಗಿನ 48.485 ಕಿ.ಮೀ.ಗಳ ಪೈಕಿ 41.52 ಕಿ.ಮೀ.ಗಳ ಚತುಷ್ಪಥ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.
ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಾ.ಹೆ.ಪ್ರಾಧಿಕಾರಕ್ಕೆ ಸಂಸದ ಸೂಚನೆ
ನಿರೀಕ್ಷೆಗೂ ಮೊದಲೇ ಮಳೆಗಾಲ ಪ್ರಾರಂಭವಾಗಿದ್ದು, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ ರೋಡ್-ಅಡ್ಡಹೊಳೆ ಚತುಷ್ಪಥ ಕಾಮಗಾರಿ ಅಂತಿಮದಲ್ಲಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲಡ್ಕ ಫ್ಲೈಓವರ್ ಸೇರಿದಂತೆ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ತೆರವುಗೊಳಿಸಿ ಅನುಕೂಲ ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಮುಂಗಾರು ಚುರುಕುಗೊಂಡಿರುವ ಕಾರಣ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ-ಆತಂಕ ಎದುರಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಎಲ್ಲೆಲ್ಲಿ ಕಾಮಗಾರಿಯಿಂದ ವಾಹನಗಳ ಸಂಚಾರಕ್ಕೆ ತೊಂದರೆ ಎದುರಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಕ್ಯಾ. ಚೌಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸದ್ಯ ಸರ್ವಪಕ್ಷದ ನಿಯೋಗದಲ್ಲಿ ವಿದೇಶದಲ್ಲಿರುವ ಕ್ಯಾ. ಚೌಟ, ಮಳೆಗಾಲ ಪ್ರಾರಂಭವಾಗಿರುವ ಕಾರಣ ಬಿ.ಸಿ.ರೋಡ್-ಅಡ್ಡಹೊಳೆ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಿರಂತರ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಮೇ 29ರಿಂದ ಮಾಣಿ, ಉಪ್ಪಿನಂಗಡಿ ಅಂಡರ್ ಪಾಸ್ ನಲ್ಲಿ ಸಂಚಾರಕ್ಕೆ ಅವಕಾಶ
ಹೆದ್ದಾರಿ ಪ್ರಾಧಿಕಾರವು ಮೇ 29ರಿಂದ ಮಾಣಿ ಬಳಿಯ ವೆಹಿಕಲ್ ಅಂಡರ್ ಪಾಸ್(ವಿಯುಪಿ) ಹಾಗೂ ಉಪ್ಪಿನಂಗಡಿ ಬಳಿಯ ವೆಹಿಕಲ್ ಅಂಡರ್ ಪಾಸ್ ದ್ವಿ ಪಥವನ್ನು ಸಂಚಾರಕ್ಕೆ ಮುಕ್ತಗೊಳಿಸಲಿದೆ. ಅಲ್ಲದೆ, ಜೂ. 2ರಿಂದ ಕಲ್ಲಡ್ಕ ಪೇಟೆಯಲ್ಲಿರುವ ಮೇಲು ರಸ್ತೆ(ಫ್ಲೈ ಓವರ್)ಯಲ್ಲಿ ಎಡಭಾಗವನ್ನು ವಾಹನಗಳ ಸಂಚಾರಕ್ಕೆ ತೆರವುಗೊಳಿಸಲಾಗುತ್ತದೆ. ಇನ್ನು ತುಂಬೆಯಲ್ಲಿ ನೀರು ನಿಲ್ಲುವ ಸಮಸ್ಯೆ ಪರಿಹರಿಸುವಂತೆಯೂ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿತ್ತು. ಇದಕ್ಕೆ ಪರಿಹಾರವಾಗಿ ಎನ್.ಎಚ್.ಎ.ಐ. ಪೈಪ್ ಕಲ್ವರ್ಟ್ ಅಳವಡಿಸಿದ್ದು, ಕಾಮಗಾರಿ ಪೂರ್ಣಗೊಂಡರೆ ಇಲ್ಲಿಯೂ ಮಳೆಗಾಲದಲ್ಲಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆ ಮೂಲಕ, ಕಾಮಗಾರಿ ಪ್ರಗತಿಯಲ್ಲಿರುವ ಜಿಲ್ಲೆಯ ಎಲ್ಲ ಹೆದ್ದಾರಿಗಳಲ್ಲಿಯೂ ಮಳೆಗಾಲದ ಸಮಸ್ಯೆಯಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮದ ಜತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಕ್ಕೆ ಸೂಚಿಸಿರುವುದಾಗಿ ಕ್ಯಾ. ಚೌಟ ತಿಳಿಸಿದ್ದಾರೆ.







