ಕಲ್ಲಡ್ಕ | ದ್ವೇಷ ಭಾಷಣದ ಆರೋಪಿಯೇ ಫ್ಲೈ ಓವರ್ ಉದ್ಘಾಟಕ!
ತಾವೇ ಕಾರ್ಯಕ್ರಮ ಆಯೋಜಿಸಿ, ಮೇಲ್ಸೇತುವೆ ಉದ್ಘಾಟಿಸಿದ ಕಲ್ಲಡ್ಕ ಪ್ರಭಾಕರ ಭಟ್

ಮಂಗಳೂರು: ಕಲ್ಲಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ ನೂತನ ಮೇಲ್ಸೇತುವೆಯನ್ನು ಸೋಮವಾರ ಸಾರ್ವಜನಿಕರ ಬಳಕೆಗೆ ತೆರೆಯಲಾಗಿದೆ. ಈ ಮೇಲ್ಸೇತುವೆಯನ್ನು ಪೂಜೆ ಮಾಡಿ, ಭಾಷಣ ಮಾಡಿ, ಉದ್ಘಾಟನೆ ಮಾಡಿದ್ದು ಆರೆಸ್ಸೆಸ್ ನಾಯಕ, ದ್ವೇಷ ಭಾಷಣಕಾರ ಕಲ್ಲಡ್ಕ ಪ್ರಭಾಕರ್ ಭಟ್.
ಯಾವುದೇ ಶಾಸಕ, ಸಂಸದ ಅಥವಾ ಇತರ ಪ್ರಮುಖ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಸಂಘ ಪರಿವಾರವೇ ಆಯೋಜಿಸಿದ ಅನಧಿಕೃತ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರಕಾರ, ಜಿಲ್ಲಾಡಳಿತದ ಪರವಾಗಿ ಯಾರೂ ಹಾಜರಿರಲಿಲ್ಲ. ಸೋಮವಾರ ಮೇಲ್ಸೇತುವೆ ತೆರೆದಾಗ ಅದರ ಉದ್ಘಾಟನೆ ಮಾಡಿದ್ದು ಕಲ್ಲಡ್ಕ ಪ್ರಭಾಕರ್ ಭಟ್. ಈ ಸಂದರ್ಭದಲ್ಲಿ ಮೇಲ್ಸೇತುವೆ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರವೇ ಪ್ರಕರಣ ದಾಖಲಾಗಿದೆ. ಬಜ್ಪೆಯಲ್ಲಿ ಹತ್ಯೆಗೊಳಗಾದ ಸುಹಾಸ್ ಶೆಟ್ಡಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಮಾಜದ ಸ್ವಾಸ್ತ್ಯ ಕೆಡುವಂತೆ, ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಉಂಟು ಮಾಡುವಂತೆ, ಪ್ರಚೋದನಾತ್ಮ ಕವಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ಬಂಟ್ವಾಳ ತಾಲ್ಲೂಕಿನ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಮೇ 12 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿತ್ತು. ಸುಮಾರು 500 ಜನ ಭಾಗವಹಿಸಿದ್ದರು. ಈ ಕಾರ್ಯಕ್ರಮ ದಲ್ಲಿ ಭಾಷಣ ಮಾಡುವ ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜೂನ್ 2ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಕಲಂ: 353(2) ಪ್ರಕಾರ ಪ್ರಕರಣ ದಾಖಲಾಗಿದೆ.
ದ್ವೇಷ ಭಾಷಣ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದು, ಎಷ್ಟೇ ಪ್ರಭಾವಿಗಳಿದ್ದರೂ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ನಿರ್ದೇಶನ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮೇ 31 ರಂದು ತಿಳಿಸಿದ್ದರು.
ಆದರೆ ಕಲ್ಲಡ್ಕ ಪ್ರಭಾಕರ್ ಭಟ್ ಮಾತ್ರ ತನಗೂ ಕೇಸಿಗೂ ಸಂಬಂಧವೇ ಇಲ್ಲವೆಂಬಂತೆ ಕಲ್ಲಡ್ಕದಲ್ಲಿ ತಾವೇ ಕಾರ್ಯಕ್ರಮ ಆಯೋಜಿಸಿ, ತಾವೇ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಹೆದ್ದಾರಿಯ ಮಹತ್ವದ ಮೇಲ್ಸೇತುವೆಯನ್ನು ತಾವೇ ಉದ್ಘಾಟನೆ ಮಾಡಿ ಭಾಷಣ ಬಿಗಿದಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಹೊಗಳಿದ್ದಾರೆ.