ಕಣಚೂರು: ವಿದ್ಯಾರ್ಥಿ ಸಂಸತ್ತು - ವಿದ್ಯಾರ್ಥಿ ಸಂಘಗಳ ಉದ್ಘಾಟನೆ

ಕೊಣಾಜೆ; ದೇರಳಕಟ್ಟೆಯ ಕಣಚೂರು ಪದವಿ ಪೂರ್ವ ಕಾಲೇಜಿನ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ತು- ವಿದ್ಯಾರ್ಥಿ ಸಂಘಗಳ ಉದ್ಘಾಟನೆಯು ದೇರಳಕಟ್ಟೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದಾಯ್ಜಿವರ್ಲ್ಡ್ ಮಾಧ್ಯಮದ ಸಂಸ್ಥಾಪಕರಾದ ವಾಲ್ಟರ್ ಡಿಸೋಜ ನಂದಳಿಕೆ. "ಶಾಲಾ ನಾಯಕರಾದವರು ಕೆಲವೊಂದು ಅವಶ್ಯ ಗುಣಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗುವುದಲ್ಲದೆ, ಶ್ರದ್ಧೆಯಿಂದ ಕೆಲಸ ಮಾಡಬೇಕು. ಇಂದಿನ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಸಮುದಾಯದ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಮುಖ್ಯಸ್ಥರಾದ ಡಾ. ಹಾಜಿ ಯು.ಕೆ.ಮೋನುರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ, ನೂತನ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಶುಭ ಹಾರೈಸಿದ್ದಾರೆ.
ಪ್ರಾಂಶುಪಾಲರಾದ ಶಾಹಿದಾ ಬಿ.ಎಮ್ ಪ್ರಮಾಣ ವಚನ ಬೋಧಿಸಿದರು. ಹೊಸದಾಗಿ ಆಯ್ಕೆಯಾದ ನಾಯಕರು ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ಶೈಕ್ಷಣಿಕ ವರ್ಷದ ಪದವಿ ಪೂರ್ವ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಪಡೆದ, ಮಿಸಮ್ ಅತಿರಾ ಖಾನ್ ರನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
2025 -26 ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷರಾಗಿ ಅಲೀನಾ ಆಯಿಷ , ಉಪ ಅಧ್ಯಕ್ಷರಾಗಿ ಫಾತಿಮ ಅಸ್ನ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಾರೋನ್ ಸಲೋನಿ ಮಾಬೆನ್, ಕ್ರೀಡಾ ಕಾರ್ಯದರ್ಶಿಯಾಗಿ ತನ್ವೀರಾ ಇವರು ಸಾರ್ವತ್ರಿಕ ಚುನಾವಣೆಯ ಮೂಲಕ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ.ಅಬ್ದುಲ್ ರೆಹಮಾನ್, ಸಂಸ್ಥೆಯ ಸಂಚಾಲಕರಾದ ಮಿ.ಅಬ್ದುಲ್ ರೆಹ್ಮಾನ್, ಟ್ರಸ್ಟಿ ಉಮಯ್ಯಾ ಬಾನು, ವಿವಿಧ ಸಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಶಿಭಾನಿ ಕಾರ್ಯಕ್ರಮವನ್ನು ನಿರ್ವಹಿಸಿದರು, ಪ್ರಾಂಶುಪಾಲರಾದ ಶಾಹಿದಾ ಬಿ.ಎಂ. ಅತಿಥಿಗಳನ್ನು ಸ್ವಾಗತಿಸಿದರು, ಪ್ರಮಿತ ವಿದ್ಯಾರ್ಥಿ ಸಂಘದ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾಜಿದಾ ವಂದಿಸಿದರು.







