ಮಂಗಳೂರು ವಿವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಕೊಣಾಜೆ: ಬದುಕಲು ನಮಗೆ ಹೇಗೆ ಕನ್ನಡದ ನೆಲಬೇಕೋ ಹಾಗೆ ಕನ್ನಡ ಭಾಷೆಯನ್ನೂ ಹೃದಯದಿಂದ ಪ್ರೀತಿಸಬೇಕು. ಕನ್ನಡದ ರಕ್ಷಣೆಗೆ ಮುಂದಾಗದಿದ್ದರೆ ಅಪಾಯ ಎದುರಾಗಲಿದೆ. ಬೆಂಗಳೂರಿನಲ್ಲಿ ಕನ್ನಡಿಗರು ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೋ ಹಾಗೆಯೇ ಮಂಗಳೂರಿಗೂ ಅಂತ ಸಮಸ್ಯೆ ಎದುರಾಗಲಿದೆ. ಇಲ್ಲಿಯೂ ತುಳು ಕನ್ನಡದ ಬದಲು ಮಲಯಾಲಂ ಇನ್ನಿತರ ಭಾಷೆಗಳು ಕೇಳಿ ಬರುತ್ತಿವೆ. ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮಂಗಳೂರಿಗರೂ ಏಟು ತಿನ್ನುವ ಪರಿಸ್ಥಿತಿ ಬರಬಹುದು ಎಂದು ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಅಜಿತ್ ಪ್ರಸಾದ ಅವರು ಹೇಳಿದರು.
ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಎಂಬ ದೊಡ್ಡ ಸುಳ್ಳೊಂದನ್ನು ತಲೆಮಾರುಗಳಿಂದ ನಮ್ಮ ಮೇಲೆ ಹೇರಲಾಗಿದೆ. ಹಿಂದಿ ಮಾತ್ರ ರಾಷ್ಟ್ರಭಾಷೆಯಾಗದು. ಕನ್ನಡ ತುಳು, ತಮಿಳು, ಮಲಯಾಳ, ಕೊಂಕಣಿ ಎಲ್ಲವೂ ರಾಷ್ಟ್ರ ಭಾಷೆಗಳೇ. ತ್ರಿಭಾಷಾ ಸೂತ್ರದ ಸೂಕ್ಷ್ಮತೆಗಳನ್ನು ಮೊದಲು ನಾವು ಅರ್ಥ ಮಾಡಿಕೊಂಡರೆ ಅದು ನಮನ್ನು ಹೇಗೆ ಮೋಸ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಈ ಸೂತ್ರದ ಆಧಾರದಲ್ಲಿ ನಮಗೆ ಗೊತ್ತಿಲ್ಲದೆಯೇ ನಮ್ಮ ತೆರಿಗೆಯ ಹಣದಿಂದಲೇ ಹಿಂದಿಯನ್ನು ನಮ್ಮ ತಲೆಯ ಮೇಲೆ ಬಲವಂತದಿಂದ ತುರುಕಿಸುವ ಕೆಲಸವನ್ನು ಅವ್ಯಾಹತವಾಗಿ ಇಂದಿಗೂ ಮಾಡುತ್ತಾ ಇದ್ದಾರೆ. ಕನ್ನಡ ಅದು ಕೇವಲ ಸಂವಹನ ಭಾಷೆ ಮಾತ್ರವಲ್ಲ ಪ್ರತಿಯೊಬ್ಬನ ಕನ್ನಡಿಗನ ಹೃದಯದಲ್ಲಿ ನೆಲೆ ನಿಲ್ಲಬೇಕಾದ ಭಾಷೆಯಾಗಿದೆ ಎಂದರು.
ಮಂಗಳೂರು ವಿವಿ ಕುಲಸಚಿವರಾದ ಕೆ.ರಾಜು ಮೊಗವೀರ ಅವರು ಮಾತನಾಡಿ, ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧವಿದೆ. ಇದನ್ನು ಬಹುತ್ವದ ನೆಲೆಯಲ್ಲೇ ಅರ್ಥಮಾಡಿಕೊಂಡು ಮುನ್ನಡೆಯಬೇಕು. ಇವತ್ತಿನ ತಂತ್ರಜ್ಞಾನವನ್ನು ಕನ್ನಡ ಬೆಳವಣಿಗೆಗೆ ಪೂರಕವಾಗಿ ಬೆಳೆಸಬೇಕಾದ ಜಾಗೃತಿ ನಮ್ಮಲ್ಲಿರಲಿ ಎಂದರು.
ಮಂಗಳೂರು ವಿವಿ ಕುಲಪತಿ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ಕನ್ನಡದ ಪ್ರೀತಿಯೊಂದಿಗೆ ನಿರಂತರವಾಗಿ ನಡೆಯಲಿ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರಾದ ಪ್ರೊ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ ವಂದಿಸಿದರು. ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು.







