ಕಾಂತಾವರ ಕನ್ನಡ ಸಂಘದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ವಾರ್ಷಿಕ (2025) ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಮೊಗಸಾಲೆ ಪ್ರತಿಷ್ಠಾನದಿಂದ ನೀಡುವ ‘ಸಾಹಿತ್ಯ ಪ್ರಶಸ್ತಿ’ಗೆ ಕಾಸರಗೋಡಿನ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಆಯ್ಕೆಯಾಗಿದ್ದಾರೆ. ಅದೇರೀತಿ ಶ್ರೀಪತಿ ಮಂಜನಬೈಲು ದತ್ತಿನಿಧಿಯ ‘ರಂಗಸನ್ಮಾನ ಪ್ರಶಸ್ತಿ’ಗೆ ಮಂಗಳೂರಿನ ರಂಗಕರ್ಮಿ ಶಶಿರಾಜ ಕಾವೂರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಲ ಅವರ ದತ್ತಿನಿಧಿಯ ‘ಯಕ್ಷಗಾನ ಸಾಹಿತ್ಯ ಸಂಶೋಧನ ಪ್ರಶಸ್ತಿ’ಗೆ ಶಿರಸಿಯ ಹಿರಿಯ ಸಾಹಿತಿ ಅಶೋಕ ಹಾಸ್ಯಗಾರ ಮತ್ತು ಸಂಘದ ‘ವಾರ್ಷಿಕ ಗೌರವ ಪ್ರಶಸ್ತಿ’ಗೆ ಹುಲಿಮನೆ ಜಯರಾಮ ಹೆಗಡೆ ಮಿಜಾರು ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ದತ್ತಿ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂ., ವಾರ್ಷಿಕ ಗೌರವ ಪ್ರಶಸ್ತಿ ಐದು ಸಾವಿರ ರೂ. ಹಾಗೂ ಪ್ರತೀ ಪ್ರಶಸ್ತಿಯೂ ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ.28ರಂದು ಕಾಂತಾವರ ಕನ್ನಡ ಭವನದಲ್ಲಿ ಜರುಗಲಿದೆ. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಮತ್ತು ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





