‘ಸಾಹಿತ್ಯ’ ಸಾಮಾಜಿಕ ಸಮಸ್ಯೆಗಳ ಪರಿಣಾಮಗಳಿಗೆ ಕನ್ನಡಿಯಾಗಲಿ: ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿ

ಪಡುಬಿದ್ರೆ: ಸಾಹಿತ್ಯ ಸಾಮಾಜಿಕ ಸಮಸ್ಯೆಗಳ ಅನುಭವದ ಕಂತೆಯಾಗಬಾರದು ಎಂಬುದು ನಿಜವಾದರೂ, ಸಾಹಿತ್ಯ ಈ ಸಾಮಾಜಿಕ ಸಮಸ್ಯೆಗಳ ಸುತ್ತ ಇರುವ ಭೀಕರ ಪರಿಣಾಮಗಳತ್ತ ಗಮನ ಸೆಳೆಯುವಂತೆ ಜನರ ಮುಂದೆ ಇಡುವ ಕನ್ನಡಿಯಾಗಬೇಕು. ಜನರನ್ನು ಎಚ್ಚರಿಸಬೇಕು. ಇದು ಸಾಹಿತ್ಯದ ಗುಣವಾಗಬೇಕು ಎಂದು ಖ್ಯಾತ ಸಾಹಿತಿ, ಕತೆಗಾರ, ಫಕೀರ್ ಮಹಮ್ಮದ್ ಕಟ್ಪಾಡಿ ಹೇಳಿದ್ದಾರೆ.
ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಶನಿವಾರ ನಡೆದ 7ನೇ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ‘ಪರಿಕ್ರಮ’ದ ಸರ್ವಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಸಾಹಿತ್ಯದಿಂದ ಸಮಾಜ ಸುಧಾರಣೆಯಾಗುತ್ತದೆ ಎಂಬ ಭ್ರಮೆ ತನಗಿಲ್ಲ. ಅದು ಸಮಾಜ ಸುಧಾರಕರ ಕೆಲಸ. ಆದರೆ, ಸಾಹಿತ್ಯ ಈ ನಿಟ್ಟಿನಲ್ಲಿ ಹಾದಿಯನ್ನು ತೋರಿಸುವ ಕೆಲಸ ಮಾಡುತ್ತದೆ ಎಂಬುದು ತನ್ನ ನಿರೀಕ್ಷೆಯಾಗಿದೆ ಎಂದರು.
ಕನ್ನಡ ಭಾಷೆ, ನಾಡು ನುಡಿಗಳನ್ನು ಗಮನಿಸಿದರೆ ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ಸಾಕಷ್ಟು ಬದಲಾವಣೆಯಾಗಿವೆ ಎನಿಸುತ್ತಿದೆ. ನಾವು ಹೆಮ್ಮೆ ಯಿಂದ ಹೇಳಿಕೊಳ್ಳುತ್ತಿದ್ದ ಕನ್ನಡ ಶಾಲೆಗಳು ತಮ್ಮ ಪ್ರಾತಿನಿಧ್ಯ, ಹಿರಿಮೆ ಗರಿಮೆಗಳನ್ನು ಕಳೆದುಕೊಂಡು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆದು ಕೃತಾರ್ಥಗೊಂಡಿವೆ. ಹಳ್ಳಿಯಲ್ಲಾದರೂ ಕನ್ನಡ ಉಳಿದಿದೆ ಎಂದುಕೊಂಡರೆ, ಇಲ್ಲಿನ ಮಕ್ಕಳೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ‘ಐ ಡೋಂಟ್ ನೋ ಕನ್ನಡ’ ಎನ್ನುತ್ತಿವೆ ಎಂದವರು ವಿಷಾಧಿಸಿದರು.
ಕನ್ನಡವೇ ಸಾರ್ವಭೌಮ: ಭಾಷೆ ಯಾವುದಾದರೂ ಕಲಿಯುವುದಕ್ಕೆ ಅಡ್ಡಿ ಆತಂಕ ಯಾರದ್ದೂ ಇರಬಾರದು. ಆದರೆ ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಅಡ್ಡಿ ಇರಬಾರದು. ಕನ್ನಡವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವೆಂದು ಮನಗಾಣಬೇಕಾದದ್ದು ಅತ್ಯಗತ್ಯ. ಮುಂದಿನ ಜನಾಂಗಕ್ಕೆ ನಾವು ನೀಡಬೇಕಾದ ಅತ್ಯವಶ್ಯಕ ಕೊಡುಗೆಯಾಗಿ ಕನ್ನಡ ಸ್ವಾಭಿಮಾನ ಮೂಡಿಸುವ ಕೆಲಸವಾಗ ಬೇಕಾಗಿದೆ. ನಮ್ಮ ಕನ್ನಡ ಅಭಿಮಾನ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ನಿರಂತರವಾಗಿ ಕನ್ನಡದ ಕೆಲಸ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರು ಸಂಸ್ಕತಿ, ನೆಲ, ಜಲ, ವಾತಾವರಣದ ಜತೆಗಿನ ತಮ್ಮ ಸಂಪರ್ಕವನ್ನು ಕಡಿದುಕೊಂಡಂತೆ ಕಂಡುಬರುತ್ತಿದೆ. ಪಟ್ಟಣಗಳು ಬೆಳೆಯುತ್ತಿವೆ. ಹಳ್ಳಿ, ಊರು ಬರಡಾಗುತ್ತಿದೆ ಅಥವಾ ಚಿಕ್ಕದಾಗುತ್ತಿವೆ ಎಂದು ಫಕೀರ್ ಮಹಮ್ಮದ್ ಕಟ್ಪಾಡಿ ನುಡಿದರು.
ನಮ್ಮ ಕನ್ನಡಾಭಿಮಾನ ನವೆಂಬರ್ ತಿಂಗಳಿಗಷ್ಟೆ ಸೀಮಿತವಾಗದಿರಲಿ. ಅದು ನಿರಂತರವಾಗಿ ಮುಂದುವರಿಯಬೇಕು. ಕನ್ನಡ ತೇರು ನಡೆವ ದಾರಿ ಕರಾವಳಿಯಲ್ಲಿ ಸೊಗಸಾಗಿದೆ. ಕರಾವಳಿಯಲ್ಲಿ ಎಲ್ಲರನ್ನೂ, ಎಲ್ಲವನ್ನೂ ಗಮನಿಸಿ, ಆಧರಿಸಿ, ಅರಗಿಸಿಕೊಂಡು ಕನ್ನಡ ಭಾಷೆಯು ಮುಂದುವರಿದಿದೆ ಎಂದು ಅವರು ನುಡಿದರು.
ಹಿರಿಯ ಸಾಹಿತಿಗಳಾದ ಡಾ.ಯು.ಆರ್.ಅನಂತಮೂರ್ತಿ, ಲಂಕೇಶ್ ಸಹಿತ ವಿವಿಧ ಸಾಹಿತಿಗಳ ಕೃತಿಗಳನ್ನು ಮೆಚ್ಚಿಕೊಂಡೆ 52ವರ್ಷಗಳ ನನ್ನ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ಅವರ ಅನುಕರಣೆಯಿಲ್ಲದೆ ಕಥೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಬರೆದಿದ್ದೇನೆ. ಸಾಹಿತ್ಯ ಲೋಕ ನನ್ನನ್ನು ಆಧರಿಸಿದೆ, ಬೆಳೆಸಿದೆ. ಇಂದು ಅಂಗ್ಲ ಭಾಷಾ ಮೋಹ ಅಧಿಕವಾಗಿದೆ. ಸಾಹಿತ್ಯದ ದಿಗ್ಗಜಗಳೆಲ್ಲರೂ ಕನ್ನಡ ಮಾಧ್ಯಮದಲ್ಲೇ ಕಲಿತವರಾಗಿದ್ದಾರೆ. ಹಾಗಾಗಿ ಕನ್ನಡ ಭಾಷಾ ಪ್ರೇಮವನ್ನು ಬಿಟ್ಟುಕೊಡದಿರುವ ಮನಸ್ಸು ನಮ್ಮದಾಗಿರಬೇಕು ಎಂದು ಫಕೀರ್ ಮಹಮ್ಮದ್ ಕಟ್ಪಾಡಿ ಹೇಳಿದರು.
ಎಲ್ಲರನ್ನು, ಎಲ್ಲವನ್ನು ಸಹಿಸಿಕೊಳ್ಳುವ ಆಧ್ಯಾತ್ಮವೇ ಸಾಹಿತ್ಯವೆನಿದೆ. ಜಿಲ್ಲೆಯಲ್ಲಿ ಹೆಸರು ಮಾಡಿದ್ದ ಕೊರಡ್ಕಲ್, ಪಣಿಯಾಡಿ, ಕಡಂದಲೆ ಅವರ ಸಾಹಿತ್ಯಗಳನ್ನು ನಾವು ಓದುತ್ತಿದ್ದೆವು. ಪತ್ರಿಕೆ ಓದುವ ಹವ್ಯಾಸ ಬೆಳೆಸಿ ಕೊಂಡಿದ್ದೆವು. ಇದರಲ್ಲಿದ್ದ ಶುದ್ಧ ಸಾಹಿತ್ಯ ನಮಗೆ ಪ್ರಿಯವಾಗಿತ್ತು. ಹಾಗಾಗಿ ಇಂತಹಾ ಸಾಹಿತ್ಯದ ವಿವಿಧ ಮಜಲುಗಳು ಮುಂದಿನ ಪೀಳಿಗೆಗೂ ಸಾಗಿ ಬರಬೇಕು ಎಂದು ಅವರು ಹೇಳಿದರು.
ಸಮ್ಮೇಳನ ಉದ್ಘಾಟನೆ: ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಕೊರಗ ಸಾಹಿತ್ಯ ಧ್ವಜವನ್ನು ಹಸ್ತಾಂತರಿಸಿದರು. ಕಸಾಪ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು ಮೂರು ಕನ್ನಡ ಸಾಹಿತ್ಯಿಕ ಕೃತಿಗಳನ್ನು ಬಿಡುಗಡೆಗೊಳಿಸಿ ದರು.
ಕನ್ನಡ ಮತ್ತು ಸಂಸ್ಕತಿ ಇಲಾಖಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಎಲ್ಲಮ್ಮ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿದರು.
ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಅಲ್ ಅಝ್‌ಹರ್ ಶಾಲಾ ಸಂಚಾಲಕ ಶೇಖಬ್ಬ ಕೋಟೆ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಶ್ಮಾ ಮೆಂಡನ್, ಉದ್ಯಮಿ ರಾಲ್ಫಿ ಡಿಕೋಸ್ಟ, ನಿವೃತ್ತ ಅಧಿಕಾರಿ ರಾಜು ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ ಸ್ವಾಗತಿಸಿದರು. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತನಾಡಿದರು. ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು. ದೀಪಕ್ ಬೀರ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರೆ, ಪ್ರೊ. ವಿದ್ಯಾ ಅಮ್ಮಣ್ಣಾಯ ಹಾಗೂ ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರ್ವಹಿಸಿದರು. ಸಮ್ಮೇಳನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ ಸ್ವಾಗತಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.
ಸಭೆಯ ಆರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಫಕೀರ್ ಮಹಮ್ಮದ್ ಕಟ್ಪಾಡಿ ಹಾಗೂ ಕನ್ನಡ ಮಾತೆ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಿತು.
ಹೆಜಮಾಡಿ ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಶ್ಮಾ ಮೆಂಡನ್ ರಾಷ್ಟ್ರ ಧ್ವಜಾರೋಹಣ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಿದರು. ಸಮ್ಮೇಳನ ದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು.
ಬದಲಾದ ಕರಾವಳಿ
ಅವಿಭಜಿತ ದಕ್ಷಿಣ ಕನ್ನಡ ನನ್ನ ಕಾರ್ಯಕ್ಷೇತ್ರವಾಗಿದೆ. ಇಲ್ಲಿನ ಆಗುಹೋಗುಗಳನ್ನು, ಘಟನೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಬಾಲ್ಯದಲ್ಲಿ ಕಂಡು ಅನುಭವಿಸಿದ್ದ ಇಲ್ಲಿನ ಸೌಹಾರ್ದ ಯುತ ವಾತಾವರಣ ಕ್ರಮೇಣ ಶಿಥಿಲಗೊಳ್ಳುತ್ತಾ ಹಿಂಸೆಯಲ್ಲಿ ಮುಳುಗಿ ರುವುದನ್ನು ಕಂಡು ದಂಗಾಗಿದ್ದೇನೆ ಎಂದು ಹಲವು ಕತೆ-ಕಾದಂಬರಿಗಳ ಮೂಲಕ ಹಿಂದು- ಮುಸ್ಲಿಂ ಭಾವೈಕ್ಯತೆಯನ್ನು ಸಾರಿದ ಹಿರಿಯ ಕತೆಗಾರ ಫಕೀರ್ ಮಹಮ್ಮದ್ ಕಟ್ಪಾಡಿ ನೋವಿನಿಂದ ನುಡಿದರು.
ಇದಕ್ಕೆ ಕಾರಣಗಳನ್ನು ಸಹ ಅನ್ವೇಷಿಸಿದ್ದೇನೆ. ವ್ಯಾಪಾರದಲ್ಲಿ ಮೂಡಿದ ಕತ್ತುಕೊಯ್ಯುವ ಪೈಪೋಟಿ, ಧರ್ಮಕಾರಣದ ರಾಜಕೀಯ, ಪೂರ್ವಾಗ್ರಹ ಪೀಡಿತ ಸಮಾಜ ನಿರ್ಮಾಣ ಮುಂತಾದ ಕಾರಣಗಳನ್ನೂ ಕಂಡು ಕೊಂಡಿದ್ದೇನೆ. ಇದರ ಕೊನೆಯಿಲ್ಲದ ಬೆಳವಣಿಗೆ ‘ದಜ್ಜಾಲ’ನ ರೂಪ ಧರಿಸಿದ್ದು ಕಂಡು ಭಯಭೀತನಾಗಿದ್ದೇನೆ. ಇದಕ್ಕೆ ಕೊನೆ ಎಂದು? ಪ್ರಶ್ನೆಗಳು ಹಲವಾರಿವೆ. ಆದರೆ ಉತ್ತರವನ್ನು ಮಾತ್ರ ಹುಡುಕಬೇಕಿದೆ ಎಂದರು.







