ಕಾರಾಜೆ: ರಕ್ತದಾನ ಶಿಬಿರ, ಯುವ ವೈದ್ಯರಿಗೆ ಅಭಿನಂದನೆ ಕಾರ್ಯಕ್ರಮ

ಬಂಟ್ವಾಳ: ದಿನೇ ದಿನೇ ಪ್ರತಿದಿನವೂ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ಆದ್ದರಿಂದ ರಕ್ತದಾನದ ಬಗ್ಗೆ ಇನ್ನಷ್ಟು ಜನಜಾಗೃತಿ ಮೂಡಿಸುವ ಅನಿವಾರ್ಯ ಇದೆ ಎಂದು ದೇರಳಕಟ್ಟೆಯ ಕ್ಷೇಮ ಅಕಾಡಮಿಯ ಪೆಥೋಲಜಿ ವಿಭಾಗದ ವೈದ್ಯೆ ಡಾ.ಮಂಜುಶ್ರೀ ಅಭಿಪ್ರಾಯಿಸಿದರು.
ಅವರು ಬಂಟ್ವಾಳ ತಾಲೂಕಿನ ಕಾರಾಜೆಯ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛ ಕಾರಾಜೆ ಸಮಿತಿಯು ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ಹಾಗೂ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಯುವ ವೈದ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ದಿನಗಳಲ್ಲಿ ರಕ್ತದ ಬೇಡಿಕೆ ಹಾಗೂ ಪೂರೈಕೆಯ ನಡುವೆ ತುಂಬಾ ಅಂತರ ಉಂಟಾಗುತ್ತಿದೆ. ಈ ಅಂತರವನ್ನು ಕಡಿಮೆ ಮಾಡಲು ರಕ್ತದಾನವನ್ನು ಹೆಚ್ಚಿಸುವುದರಿಂದ ಮಾತ್ರ ಸಾಧ್ಯ ಎಂದು ಅವರು ತಿಳಿಸಿದರು.
ಆರೋಗ್ಯವಂತ ಪುರುಷರು ಪ್ರತೀ ಮೂರು ತಿಂಗಳಿಗೊಮ್ಮೆ ಹಾಗೂ ಆರೋಗ್ಯವಂತ ಮಹಿಳೆಯರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಕೂಡ ಹಲವಾರು ಧನಾತ್ಮಕ ಬದಲಾವಣೆಗಳು ಆಗುತ್ತವೆ. ಹಾಗಾಗಿ, ರಕ್ತದಾನ ಮಾಡುವುದಕ್ಕೆ ಯಾರೂ ಹಿಂಜರಿಯಬಾರದು ಎಂದು ಡಾ.ಮಂಜುಶ್ರೀ ಕಿವಿಮಾತು ಹೇಳಿದರು.
ಸೈಂಟ್ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ದಿನೇಶ್ ನಾಯಕ್ ಮಾತನಾಡಿ, “ಇಂದಿನ ಯುಗದಲ್ಲಿ ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಉತ್ಪಾದಿಸಲು ಯಾವ ವಿಜ್ಞಾನಿಗೂ ಆಗಿಲ್ಲ ಎಂಬುದು ವಾಸ್ತವ. ರಕ್ತದಾನದ ಮೂಲಕ ನಾವು ಬದುಕಿರುವಾಗಲೇ ಮತ್ತೊಬ್ಬರ ಜೀವ ಉಳಿಸಬಹುದಾಗಿದೆ. ಇಂದು ಇಲ್ಲಿ ರಕ್ತದಾನ ಮಾಡಲು ಬಂದ ಎಲ್ಲ ಸಹೃದಯಿಗಳು ನಿಜವಾದ ಹೀರೋಗಳು” ಎಂದರು.
ಸ್ವಚ್ಛ ಕಾರಾಜೆ ಸಮಿತಿಯ ಅಧ್ಯಕ್ಷ ಮುಹಮ್ಮದ್ ಅಶ್ರಫ್ ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೌರವಾಧ್ಯಕ್ಷ ಉಮರಾಕ ಅಧ್ಯಕ್ಷತೆ ವಹಿಸಿದ್ದರು.
ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ ನ ಮುಖಂಡ ಶೌಕತ್ ಇಂದಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರಾಜೆಯ ಯುವ ವೈದ್ಯರಾದ ಡಾ. ಮುಹಮ್ಮದ್ ಉನೈಸ್ ಹಾಗೂ ಡಾ. ಕೀರ್ತನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸ್ವಚ್ಛ ಕಾರಾಜೆ ಸಮಿತಿಯ ಜೊತೆ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಅಭಿನಂದನಾ ಪತ್ರ ವಾಚಿಸಿದರು.
ವೇದಿಕೆಯಲ್ಲಿ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಕರೀಂ ಉಪಸ್ಥಿತರಿದ್ದರು.
ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷೆ ಫೌಝಿಯಾ, ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೂ ಆಗಿರುವ ಸ್ವಚ್ಛ ಕಾರಾಜೆ ಸಮಿತಿಯ ಉಪಾಧ್ಯಕ್ಷ ಅಬ್ಬಾಸ್, ಕಾರ್ಯದರ್ಶಿ ತಮೀಝ್ ಅಲಿ ಕಾರಾಜೆ, ಜೊತೆ ಕಾರ್ಯದರ್ಶಿ ಮುಹಮ್ಮದ್ ಸಮೀರ್, ಕೋಶಾಧಿಕಾರಿ ಮುಹಮ್ಮದ್ ಝುಬೈರ್, ಲೆಕ್ಕ ಪರಿಶೋಧಕ ಅಬ್ದುಲ್ ಜಲೀಲ್, ಸಂಘಟಕರಾದ ಮುಹಮ್ಮದ್ ಹಾರಿಸ್, ಹಮೀದ್, ಫಝುಲ್ ಕಾರಾಜೆ, ಎಮರ್ಜೆನ್ಸಿ ಬ್ಲಡ್ ಹೆಲ್ಪ್ ಲೈನ್ನ ಪದಾಧಿಕಾರಿಗಳಾದ ಮುಹಮ್ಮದ್ ರಫೀಕ್ ತುಂಬೆ. ಅಲ್ತಾಫ್ ಟಿಪ್ಪು ನಗರ, ಇಬ್ರಾಹೀಂ ನಂದಾವರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ 48 ಮಂದಿ ರಕ್ತದಾನ ಮಾಡಿದರು.







