ಮಂಗಳೂರು: 300 ಕವಿಗಳ 300 ರಚನೆಗಳಿಂದ ಕೂಡಿದ ‘ಕರಾವಳಿ ಕವನಗಳು’ ಕೃತಿ ಬಿಡುಗಡೆ

ಮಂಗಳೂರು: ಬಹು ಓದು ಬಳಗ ಮಂಗಳೂರು ಮತ್ತು ಆಕೃತಿ ಆಶಯ ಪಬ್ಲಿಕೇಶನ್ಸ್ ಸಹಯೋಗದಲ್ಲಿ 300 ಕವಿಗಳ 300 ರಚನೆಗಳಿಂದ ಕೂಡಿದ ‘ಕರಾವಳಿ ಕವನಗಳು’ ಕೃತಿಯನ್ನು ಮೈಸೂರು ಮಾನಸ ಗಂಗೋತ್ರಿ ಶಾಸ್ತ್ರೀಯ ಅಧ್ಯಯನ ಕೇಂದ್ರದ ಸಂಶೋಧಕ ಡಾ ಚಲಪತಿ ಆರ್. ಬಿಡುಗಡೆಗೊಳಿಸಿದರು.
ಸಹೋದಯ ಸಭಾಂಗಣದಲ್ಲಿ ರವಿವಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಗತ್ತು ವ್ಯವಹಾರ, ವ್ಯಾಪಾರ, ರಾಜಕಾರಣ, ಮೇಲು ಕೀಳೆಂಬ ಹೊಡೆದಾಟದಲ್ಲಿ ಮುಳುಗಿರುವಾಗ ಅದೆಲ್ಲವನ್ನೂ ಮೀರಿದ ಬದುಕಿನ ಸಂಭ್ರಮವನ್ನು ಈ ಕೃತಿ ಬಿಡುಗಡೆಯ ಮೂಲಕ ಆಚರಿಸುತ್ತಿರುವುದು ಮೆಚ್ಚುವಂತದ್ದು ಎಂದು ಅವರು ಹೇಳಿದರು.
ಒಂದು ಕಾಲದಲ್ಲಿ ಸಾಮರಸ್ಯದ ಬದುಕಿನ ಮೂಲಕ ಬುದ್ಧಿವಂತರ ಜಿಲ್ಲೆಯಾಗಿ ಗಮನ ಸೆಳೆದಿದ್ದ ಕರಾವಳಿ ಕಳೆದ ಕೆಲ ವರ್ಷಗಳಿಂದೀಚೆಗೆ ಅವೆಲ್ಲದ್ದಕ್ಕೂ ತದ್ವಿರುದ್ಧ ಚುಟುವಟಿಕೆಗಳಿಂದ ಸುದ್ದಿಯಾಗಿದೆ. ಇಂತಹ ಸಮಯದಲ್ಲಿ ಎಲ್ಲಾ ಸಿದ್ಧಾಂತಗಳನ್ನು ಮೀರಿ ಎಲ್ಲರೂ ಒಂದೇ, ಎಲ್ಲರಿಗೂ ಸಮಬಾಳು ಎನ್ನುವ ರೀತಿಯಲ್ಲಿ ಈ ಕೃತಿ ಮೂಡಿ ಬಂದಿದೆ ಎಂದು ಅವರು ವಿಶ್ಲೇಷಿಸಿದರು.
ಕವನಗಳು ವಿಭಿನ್ನ ಚಿಂತನೆ, ಆಲೋಚನೆ, ಧಾರ್ಮಿಕ ಮನೋಭಾವ, ಸಂಪ್ರದಾಯದ ಜತೆಗೆ ಕರ್ನಾಟಕದ ವಿಭಿನ್ನ ಕನ್ನಡ ಭಾಷೆಗಳನ್ನೂ ಒಳಗೊಂಡಿದೆ. ತುಡಿತ, ಮಿಡಿತ, ಕೌಟುಂಬಿಕ ಸನ್ನಿವೇಶಗಳ ಜತೆಗೆ ಜಾಗತಿಕ ಯುದ್ಧದ ಪರಿಣಾಮಗಳ ಕುರಿತಂತೆಯೂ ಕವನಗಳು ಮೂಡಿಬಂದಿವೆ ಎಂದವರು ಹೇಳಿದರು.
ಹಿರಿಯ ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಅಜ್ಜರಕಾಡಿನ ಡಾ.ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ನಿಕೇತನ ಪುಸ್ತಕ ವಿಮರ್ಶೆ ಮಾಡಿದರು.
ಮುಖ್ಯ ಅತಿಥಿಯಾಗಿ ಸಾಹಿತಿ ಅರವಿಂದ ಚೊಕ್ಕಾಡಿ ಹಾಗೂ ಬಹು ಓದು ಬಳಗದ ಡಾ. ಸತೀಶ್ ಚಿತ್ರಾಪು ವೇದಿಕೆಯಲ್ಲಿದ್ದರು.
ಆಕೃತಿ ಆಶಯ ಪಬ್ಲಿಕೇಶನ್‌ನ ಪ್ರಕಾಶಕ ಕಲ್ಲೂರು ನಾಗೇಶ ಸ್ವಾಗತಿಸಿದರು. ಪುಸ್ತಕದ ಪ್ರಧಾನ ಸಂಪಾದಕರಾದ ಡಾ. ಉಷಾ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಡಾ. ರಾಘವೇಂದ್ರ ಜಿಗಳೂರ ವಂದಿಸಿದರು. ಜಾ. ಜ್ಯೋತಿಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ವಿನಮ್ರ ಇಡ್ಕಿದು ಆಶಯ ಗೀತೆ ಹಾಡಿದರು.
ಪುಸ್ತಕ ಬಿಡುಗಡೆಗೆ ಮುನ್ನ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿನಿ ದಿಯಾ ಉದಯ್ ಡಿ. ಅಧ್ಯಕ್ಷತೆಯಲ್ಲಿ ಯುವ ಕವಿಗಳಿಂದ ಕವಿಗೋಷ್ಟಿ ನಡೆಯಿತು.







