ಕರ್ಣಾಟಕ ಬ್ಯಾಂಕಿಗೆ ದ್ವಿತೀಯ ತ್ರೈಮಾಸಿಕದಲ್ಲಿ 319.12 ಕೋಟಿ ರೂ.ನಿವ್ವಳ ಲಾಭ

ಕರ್ಣಾಟಕ ಬ್ಯಾಂಕ್
ಮಂಗಳೂರು,ನ.8: ಕರ್ಣಾಟಕ ಬ್ಯಾಂಕ್ ಸೆಪ್ಟೆಂಬರ್ 2025ಕ್ಕೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 319.12 ಕೋ.ರೂ.ಗಳ ನಿವ್ವಳ ಲಾಭವನ್ನು ದಾಖಲಿಸಿದೆ. ಜೂನ್ 2025ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಗಳಿಸಿದ್ದ 292.40 ಕೋ.ರೂ.ಗಳಿಗೆ ಹೋಲಿಸಿದರೆ ಇದು ಶೇ.9.1ರಷ್ಟು ಏರಿಕೆಯಾಗಿದೆ.
ಶನಿವಾರ ಇಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ಸೆ.30ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕ ಹಣಕಾಸು ಫಲಿತಾಂಶಗಳ್ನು ಅನುಮೋದಿಸಿತು. ಸೆ.2025ಕ್ಕೆ ಅಂತ್ಯಗೊಂಡ ಅರ್ಧ ವರ್ಷದಲ್ಲಿ ಬ್ಯಾಂಕಿನ ನಿವ್ವಳ ಲಾಭವು 611.52 ಕೋ.ರೂ.ಗಳಾಗಿದ್ದು,ಸೆ.2024ಕ್ಕೆ ಅಂತ್ಯಗೊಂಡಿದ್ದ ಅರ್ಧ ವರ್ಷದಲ್ಲಿ ಇದು 736.40 ಕೋ.ರೂ.ಗಳಷ್ಟಿತ್ತು.
ಇಲ್ಲಿಯ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ವಿತ್ತವರ್ಷ 26ರ ದ್ವಿತೀಯ ತ್ರೈಮಾಸಿಕದ ಫಲಿತಾಂಶಗಳನ್ನು ಪ್ರಕಟಿಸಿದ ಆಡಳಿತ ನಿರ್ದೇಶಕ ಹಾಗೂ ಸಿಇಒ ರಾಘವೇಂದ್ರ ಎಸ್.ಭಟ್ ಅವರು,ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಬ್ಯಾಂಕಿನ ಅತ್ಯುತ್ತಮ ಮಟ್ಟದ ಕಾರ್ಯಕ್ಷಮತೆಯು ಅಲ್ಪ ಕುಸಿತವನ್ನು ಕಂಡಿದೆ,ಆದರೆ ಆಸ್ತಿ ಗುಣಮಟ್ಟದಲ್ಲಿ ಸುಧಾರಣೆಯನ್ನು ಸಾಧಿಸಿದೆ. ಕಡಿಮೆ ವೆಚ್ಚದ ಠೇವಣಿಗಳ ನಮ್ಮ ಬುನಾದಿಯನ್ನು ಬಲಗೊಳಿಸುವುದರೊಂದಿಗೆ ಚಿಲ್ಲರೆ, ಕೃಷಿ ಮತ್ತು ಎಂಎಸ್ಎಂಇ ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಬ್ಯಾಂಕು ಮುಂದುವರಿಸಲಿದೆ ಎಂದು ಹೇಳಿದರು.







