Karnataka Budget 2026 | ಅನಿವಾಸಿ ಕನ್ನಡಿಗರಿಗೆ ನಿರಾಸೆ: ಪ್ರವಾಸಿ ಕೂಟ ವಿಟ್ಲ ಅಸಮಾಧಾನ

ವಿಟ್ಲ: ಕರ್ನಾಟಕ ರಾಜ್ಯ ಸರ್ಕಾರ ಮಂಡಿಸಿದ 2026–27ನೇ ಸಾಲಿನ ಬಜೆಟ್ ನಲ್ಲಿ ಅನಿವಾಸಿ ಕನ್ನಡಿಗರ (NRK) ಕಲ್ಯಾಣಕ್ಕಾಗಿ ಯಾವುದೇ ವಿಶೇಷ ಅನುದಾನ ಅಥವಾ ಯೋಜನೆ ಘೋಷಿಸದಿರುವ ಬಗ್ಗೆ ಪ್ರವಾಸಿ ಕೂಟ ವಿಟ್ಲ (ರಿ) ಅಸಮಾಧಾನ ವ್ಯಕ್ತಪಡಿಸಿದೆ.
ವಿಶ್ವದಾದ್ಯಂತ ದುಡಿಯುತ್ತಿರುವ ಲಕ್ಷಾಂತರ ಕನ್ನಡಿಗರು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದು, ಅವರ ಕಲ್ಯಾಣಕ್ಕಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಈ ಬಾರಿ ಬಜೆಟ್ ನಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಹಾಗೂ ಕಲ್ಯಾಣ ಯೋಜನೆಗಳಿಗೆ ಯಾವುದೇ ಆದ್ಯತೆ ನೀಡದಿರುವುದು ನಿರಾಸೆ ಉಂಟುಮಾಡಿದೆ ಎಂದು ಸಂಘಟನೆ ತಿಳಿಸಿದೆ.
ಈ ಕುರಿತು ಮಾತನಾಡಿದ ಪ್ರವಾಸಿ ಕೂಟ ವಿಟ್ಲ (ರಿ) ಅಧ್ಯಕ್ಷ ಮೊಹಮ್ಮದ್ ಮಸೂದ್ ವಿಟ್ಲ ಅವರು, ಸ್ವತಃ NRI Forum ಅಧ್ಯಕ್ಷರೂ ಆಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿವಾಸಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಬಜೆಟ್ ನಲ್ಲಿ ಯಾವುದೇ ಯೋಜನೆ ಘೋಷಿಸದಿರುವುದು ಬೇಸರ ತಂದಿದೆ ಎಂದು ಹೇಳಿದರು.
ಅನಿವಾಸಿ ಕನ್ನಡಿಗರ ಕ್ಷೇಮಕ್ಕಾಗಿ ಪ್ರವಾಸಿ ಕೂಟ ವಿಟ್ಲ (ರಿ) ಸಂಘಟನೆಯು ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅನಿವಾಸಿ ಕನ್ನಡಿಗ ಇಲಾಖೆಗೆ ಅನುದಾನ ಮೀಸಲಿಡುವುದು, ತುರ್ತು ಸಹಾಯ ನಿಧಿ ಹಾಗೂ ವಿವಿಧ ಕಲ್ಯಾಣ ಯೋಜನೆಗಳನ್ನು ಬಜೆಟ್ನಲ್ಲಿ ಸೇರಿಸುವಂತೆ ಆಗ್ರಹಿಸಿತ್ತು. ಆದರೆ ಈ ಬಾರಿ ಬಜೆಟ್ ನಲ್ಲಿ ಅದಕ್ಕೆ ಸಂಬಂಧಿಸಿದ ಯಾವುದೇ ಘೋಷಣೆ ಕಾಣಿಸದಿರುವುದು ಅನಿವಾಸಿ ಕನ್ನಡಿಗರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದು ಸಂಘಟನೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಸೂಕ್ತ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಸಂಘಟನೆ ಒತ್ತಾಯಿಸಿದೆ.







