ಕಾಟಿಪಳ್ಳ | ಸುಸಜ್ಜಿತ ಆಸ್ಪತ್ರೆ, ಒಳಚರಂಡಿ ನಿರ್ಮಿಸಲು ಸರ್ವ ಧರ್ಮೀಯರ ಸೌಹಾರ್ದ ಸಮಿತಿ ಮನವಿ
ಮಂಗಳೂರು, ನ.28: ನವ ಮಂಗಳೂರು ಬಂದರು ನಿರ್ಮಾಣಕ್ಕಾಗಿ ತನ್ನೆಲ್ಲಾ ಆಸ್ತಿಪಾಸ್ತಿಗಳನ್ನು ತ್ಯಾಗಗೈದು ಕಾಟಿಪಳ್ಳ ಪುನರ್ನಿವೇಶನ ಕಾಲನಿಯಲ್ಲಿ ವಾಸವಾಗಿರುವ ಗ್ರಾಮಸ್ಥರಿಗೆ 50 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ಮತ್ತು ಒಳಚರಂಡಿ ಕಾಮಗಾರಿಗಳನ್ನು ಬಂದರು ಪ್ರಾಧಿಕಾರದ ವತಿಯಿಂದ ನಿರ್ಮಿಸಲು ಕಾಟಿಪಳ್ಳದ ಸರ್ವ ಧರ್ಮೀಯರ ಸೌಹಾರ್ದ ಸಮಿತಿ ಮನವಿ ಮಾಡಿದೆ.
ನವಮಂಗಳೂರು ಬಂದರು ಪ್ರಾಧಿಕಾರವು ಇದೀಗ ತನ್ನ ಸುವರ್ಣ ಮಹೋತ್ಸವ ಸಂಭ್ರಮವನ್ನು ಹೊಸದಿಲ್ಲಿ ಹಾಗೂ ಪಣಂಬೂರಿನಲ್ಲಿ ಆಚರಿಸಿದೆ. ಪ್ರಾಧಿಕಾರವು ಅಮದು ಮತ್ತು ರಫ್ತು, ವ್ಯವಹಾರಗಳಲ್ಲಿ ಅತೀ ಕಡಿಮೆ ಅವಧಿಯಲ್ಲಿ ದೇಶದ ಬೃಹತ್ ಬಂದರು ಪ್ರಾಧಿಕಾರಗಳಲ್ಲಿ ನಾಲ್ಕನೇ ಸ್ನಾನಕ್ಕೇರಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 600 ಕೋ. ರೂ. ಲಾಭವನ್ನುಗಳಿಸಿ ಮುನ್ನಡೆಯುತ್ತಿದೆ. ಆದರೆ ಇದಕ್ಕೆಲ್ಲಾ ಕಾರಣಕರ್ತರಾದ ಪಣಂಬೂರು, ಬೈಕಂಪಾಡಿ ಮತ್ತು ಆಸುಪಾಸಿನ ಗ್ರಾಮಸ್ಥರು ತನ್ನ ಮನೆ ಮಠ ಹೊಲ ಗದ್ದೆಗಳ ಸಹಿತ ಬದುಕಿನ ಸರ್ವಸ್ವವನ್ನೂ ತ್ಯಾಗಗೈದು ಸರಕಾರ ನೀಡಿದ ಸೈಟಿನಲ್ಲಿ ಮನೆ ಮಾಡಿಕೊಂಡು ವಾಸವಾಗಿರುವುದನ್ನು ಗಮನಿಸಬೇಕಿದೆ. ಎಲ್ಲವನ್ನೂ ತ್ಯಾಗಗೈದು ಸುಮಾರು 65 ವರ್ಷಗಳು ಸಂದರೂ ಕಾಟಿಪಳ್ಳ ಪ್ರದೇಶದಲ್ಲಿ ಕನಿಷ್ಠ ಸೌಲಭ್ಯಗಳಿಗೂ ಅಂಗಲಾಚುವ ಪರಿಸ್ಥಿತಿ ಇದೆ.
ಬಂದರು ಪ್ರಾಧಿಕಾರದ ಸಿಎಸ್ಆರ್ ನಿಧಿಗಳು ರಾಜ್ಯದ ಬೇರೆ ಬೇರೆ ಮೂಲಗಳಿಗೆ ಹಾಗೂ ಇತರ ರಾಜ್ಯಗಳಿಗೆ ಹಂಚಿ ಹೋದರೂ ಬಂದರು ನಿರ್ಮಾಣಕ್ಕಾಗಿ ತನ್ನ ಆಸ್ತಿಪಾಸ್ತಿಗಳನ್ನು ಕಳಕೊಂಡು ಕಾಟಿಪಳ್ಳ ಗ್ರಾಮದಲ್ಲಿ ನೆಲೆಯೂರಿರುವ ಸಂತ್ರಸ್ತರಿಗೆ ಯಾವುದೇ ಯೋಜನೆಗಳು ಬಂದರು ಪ್ರಾಧಿಕಾರದಿಂದ ನಿರ್ಮಾಣವಾಗದಿರುವುದು ವಿಪರ್ಯಾಸ. ಹಾಗಾಗಿ ಕಾಟಿಪಳ್ಳ ಗ್ರಾಮದಲ್ಲಿ ನಿರ್ವಸಿತರ ಆರೋಗ್ಯ ರಕ್ಷಣೆಗಾಗಿ, ತುರ್ತು ಸೇವೆ ನೀಡಲು 50 ಹಾಸಿಗೆಗಳ ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ಕಾಟಿಪಳ್ಳ ಪ್ರದೇಶದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಅಗತ್ಯವಿರುವ ನಿಧಿಯನ್ನು ನವಮಂಗಳೂರು ಬಂದರು ಪ್ರಾಧಿಕಾರದಿಂದ ಬಿಡುಗಡೆಗೊಳಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎಂ. ಅಬ್ದುಲ್ ಖಯ್ಯೂಮ್, ಗೌರವಾಧ್ಯಕ್ಷ ಫಾ. ಸಂತೋಷ್ ಲೋಬೋ, ಸಂಚಾಲಕ ವಿಠಲ ಶೆಟ್ಟಿಗಾರ್ ಒತ್ತಾಯಿಸಿದ್ದಾರೆ.







