ಕೆ.ಸಿ.ರೋಡ್ ಸಹಕಾರಿ ಸಂಘ ದರೋಡೆ ಪ್ರಕರಣ| ತಮಿಳುನಾಡಿನ ಮುರುಗಂಡಿ, ಮುಂಬೈಯ ರಾಜೇಂದ್ರನ್, ಕಣ್ಣನ್ ಮಣಿ ಬಂಧನ
ಮೂವರು ಪ್ರಮುಖ ಆರೋಪಿಗಳ ಸೆರೆ

ಮಂಗಳೂರು, ಜ.20: ಕೋಟೆಕಾರು ವ್ಯವಸಾಯ ಸಹಕಾರಿ ಸಂಘ(ನಿ) ಕೆ.ಸಿ.ರೋಡ್ ತಲಪಾಡಿ ಶಾಖೆ ಕಚೇರಿಯಲ್ಲಿ ಶುಕ್ರವಾರ ನಡೆದ ಕೋಟ್ಯಂತರ ರೂ. ಮೌಲ್ಯದ ನಗ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿದ ಅಮ್ಮನಕೋವಿಲ್‌ನ ಮುರುಗಂಡಿ ತೇವರ್ (36), ಮುಂಬೈ ಗೋಪಿನಾಥ್ ಚೌಕ ನಿವಾಸಿ ಯೋಸುವಾ ರಾಜೇಂದ್ರನ್ (35) , ಮುಂಬೈ ಚೆಂಬೂರ್‌ನ ತಿಲಕ್‌ನಗರದ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸಹಕಾರಿ ಸಂಘದಿಂದ ದರೋಡೆ ಮಾಡಿ ಕೇರಳ ಮೂಲಕ ತಮಿಳುನಾಡುವಿಗೆ ಆರೋಪಿಗಳು ಪರಾರಿಯಾಗಿದ್ದರು. ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿ ದರೋಡೆಗೆ ಬಳಸಿದ ಕಾರು, ಮಾರಕಾಯುಧಗಳನ್ನು ವಶ ಪಡಿಸಿಕೊಂಡಿದ್ದಾರೆ.
ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯ ಇಲ್ಲ. ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.





