ಸೌಜನ್ಯ ಕೊಲೆ ಪ್ರಕರಣ: ನೈಜ ಆರೋಪಿಯ ಪತ್ತೆಗಾಗಿ ಮತ್ತು ನ್ಯಾಯಕ್ಕಾಗಿ ಧರ್ಮಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮಣ್ಣಸಂಕ ಬಳಿ ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಯ ಶೀಘ್ರ ಪತ್ತೆಯಾಗಿ ನ್ಯಾಯ ಒದಗಿಸುವಂತೆ ಕೋರಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ, ಶ್ರೀ ಅಣ್ಣಪ್ಪ ಸ್ವಾಮಿ ಬೆಟ್ಟದಲ್ಲಿ ಮತ್ತು ಧರ್ಮದೇವತೆಗಳ ಸನ್ನಿಧಿಯಲ್ಲಿ ಊರಿನ ನಾಗರಿಕರು ರವಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸೌಜನ್ಯ ಕೊಲೆ ಪ್ರಕರಣದ ನೆಪದಲ್ಲಿ ನಾಡಿನ ಸರ್ವಧರ್ಮೀಯರ ಶ್ರದ್ಧಾಕೇಂದ್ರವಾದ ಪವಿತ್ರ ಕ್ಷೇತ್ರ ಧರ್ಮಸ್ಥಳ, ದೇವಸ್ಥಾನ, ಧರ್ಮಾಧಿಕಾರಿಗಳಾದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರ ಬಗ್ಗೆ ಆಧಾರರಹಿತ ಸುಳ್ಳು ಆರೋಪಗಳೊಂದಿಗೆ ಅಪಪ್ರಚಾರ ಮಾಡಿ ಕ್ಷೇತ್ರದ ಘನತೆ, ಗೌರವಕ್ಕೆ ಧಕ್ಕೆ ಮಾಡುತ್ತಿರುವುದು ಖೇದಕರವಾಗಿದೆ. ನೈಜ ಆರೋಪಿಯ ಪತ್ತೆಯಾಗಿ ಹಾಗೂ ಆಧಾರರಹಿತ ಸುಳ್ಳುವದಂತಿ ಪಸರಿಸುವವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಊರಿನ ನಾಗರಿಕರು ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಅಣ್ಣಪ್ಪಸ್ವಾಮಿ ಬೆಟ್ಟದಲ್ಲಿಯೂ ತೆಂಗಿನಕಾಯಿ ಒಡೆದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.